ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ ಬಾಹುಬಲಿ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಹೊಸ ಕ್ರಾಂತಿಯೆಬ್ಬಿಸಿದ್ದು ನಿಮಗೆ ಗೊತ್ತೇ ಇದೆ. ಪ್ರಮುಖ ಕಲಾವಿದರಾದ ಪ್ರಭಾಸ್, ಅನುಷ್ಕಾ ಶೆಟ್ಟಿ, ತಮನ್ನಾ ಭಾಟಿಯಾ, ರಾಣಾ ದಗ್ಗುಬಾಟಿ, ರಮ್ಯಾ ಕೃಷ್ಣನ್ ಮುಂತಾದವರು ನಟಿಸಿರುವ ಸಿನಿಮಾವು ಹಲವು ದಾಖಲೆಗಳನ್ನು ಮುರಿದಿದೆ.
ಇದೀಗ ನಟ ಪ್ರಭಾಸ್ ತನ್ನ ಮಹತ್ವಾಕಂಕ್ಷೆಯ ರಾಧೆ ಶ್ಯಾಮ್ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ಪತ್ರಕರ್ತರು, ರಾಜಮೌಳಿ ಅವರು ತಮ್ಮ ಸಂಪರ್ಕಿಸಿದ್ರೆ ಬಾಹುಬಲಿ ಭಾಗ-3ರಲ್ಲಿ ಅಭಿನಯಿಸಲು ಸಿದ್ಧಿರಿದ್ದೀರಾ ಎಂದು ಪ್ರಭಾಸ್ ಅವರನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ನಟ, ಪ್ರತಿಯೊಂದು ಚಿತ್ರವೂ ಬಾಹುಬಲಿ ಆಗಲು ಸಾಧ್ಯವಿಲ್ಲ. ಅದು ವಿಭಿನ್ನವಾದ ಸಿನಿಮಾವಾಗಿದೆ. ಇದು ಒಮ್ಮೆ ಮಾತ್ರ ಸಂಭವಿಸುತ್ತದೆ. ನೀವು ಅದನ್ನು ಮತ್ತೆ ಮತ್ತೆ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ ಬಹುಶಃ ನಿಮ್ಮ ಮಾತು ಕೇಳಿ ರಾಜಮೌಳಿಯವರು ಬಾಹುಬಲಿ ಭಾಗ-3 ಸಿನಿಮಾ ಮಾಡಬಹುದೇನೋ ಎಂದು ನಗೆ ಬೀರಿದ್ದಾರೆ.
ಪ್ರಭಾಸ್ ಅವರ ಹಲವಾರು ಚಿತ್ರಗಳು ಬಿಡುಗಡೆಗೆ ಕಾಯುತ್ತಿವೆ. ರಾಧೆ ಶ್ಯಾಮ್ ಮಾರ್ಚ್ 11 ರಂದು ತೆರೆ ಮೇಲೆ ಅಬ್ಬರಿಸಲು ರೆಡಿಯಾಗಿದೆ. ಚಿತ್ರದಲ್ಲಿ ಇವರಿಗೆ ನಾಯಕಿಯಾಗಿ ನಟಿ ಪೂಜಾ ಹೆಗ್ಡೆ ಅಭಿನಯಿಸಿದ್ದಾರೆ. ಬಾಹುಬಲಿ ನಂತರ, ಶ್ರದ್ಧಾ ಕಪೂರ್ ಜೊತೆಯಾಗಿ ನಟಿಸಿದ ಸಾಹೋ ಸಿನಿಮಾ ಪ್ರಭಾಸ್ ಅವರ ಕೊನೆಯ ಬಿಡುಗಡೆಯ ಚಿತ್ರವಾಗಿತ್ತು. ಆದರೆ, ಇದು ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿತ್ತು.