68ರ ಹರೆಯದ ಮುಂಬೈನಲ್ಲಿ ವಾಸವಿರುವ ವಿಧವೆಗೆ ನೈಜೀರಿಯಾದ ವ್ಯಕ್ತಿಯೊಬ್ಬ ಯುಕೆ ಪ್ರಜೆ ಎಂದು ಪೋಸ್ ಕೊಟ್ಟು ಮದುವೆಯಾಗುವುದಾಗಿ ಭರವಸೆ ನೀಡಿ 11 ಲಕ್ಷ ರೂಪಾಯಿ ವಂಚಿಸಿದ್ದಾನೆ.
ದಕ್ಷಿಣ ವಲಯದ ಸೈಬರ್ ಪೊಲೀಸರು ಆರೋಪಿಯನ್ನು ನವದೆಹಲಿಯಲ್ಲಿ ಬಂಧಿಸಿದ್ದಾರೆ. ವಂಚಕನನ್ನು ಪೀಟರ್ ಎನ್ಜೆಗ್ವು ಎಂದು ಗುರುತಿಸಲಾಗಿದೆ. ಆರೋಪಿ ಮಹಿಳೆಯನ್ನು ಫೇಸ್ ಬುಕ್ ಮೂಲಕ ಪರಿಚಯ ಮಾಡಿಕೊಂಡಿದ್ದ ಎನ್ನಲಾಗಿದೆ.
ದೂರುದಾರ ಮಹಿಳೆ ನೀಡಿರುವ ಮಾಹಿತಿಯ ಪ್ರಕಾರ, ಆರೋಪಿಯು ತಾನೊಬ್ಬ ಉದ್ಯಮಿಯಾಗಿದ್ದು ಬ್ರಿಟನ್ನಲ್ಲಿ ವಾಸವಿದ್ದೇನೆ ಎಂದು ಹೇಳಿಕೊಂಡಿದ್ದ ಎನ್ನಲಾಗಿದೆ.
ಆರೋಪಿಯ ವಿರುದ್ಧ ಪೊಲೀಸರು ಐಟಿ ಕಾಯ್ದೆಯ ಸೆಕ್ಷನ್ಗಳನ್ನು ಸಹ ಹಾಕಿದ್ದಾರೆ. ಆರೋಪಿ ಹೆಂಡರ್ಸನ್ ಸೆಬೆಸ್ಟಿಯನ್ ಎಂಬ ಹೆಸರನ್ನು ತನ್ನ ಪ್ರೊಫೈಲ್ ಹೆಸರಾಗಿ ಬಳಸಿಕೊಂಡಿದ್ದಾನೆ ಮತ್ತು ಮಹಿಳೆಯನ್ನು ವಂಚಿಸಲು ಇನ್ನೊಬ್ಬ ವ್ಯಕ್ತಿಯ ಚಿತ್ರವನ್ನು ಹಾಕಿದ್ದಾನೆ ಎಂದು ತಿಳಿಸಿದ್ದಾರೆ. ಬಳಿಕ ಇಬ್ಬರೂ ವಾಟ್ಸಾಪ್ನಲ್ಲಿ ಚಾಟ್ ಮಾಡುತ್ತಿದ್ದರು ಎನ್ನಲಾಗಿದೆ.
ಇಬ್ಬರ ನಡುವೆ ಮಾತುಕತೆ ಹೆಚ್ಚುತ್ತಿದ್ದಂತೆಯೇ ಆರೋಪಿಯು ವೃದ್ಧೆಯ ಬಳಿ ತಾನು ನಿನಗಾಗಿ ವಿದೇಶದ ಹಣ ಹಾಗೂ ಉಡುಗೊರೆಗಳನ್ನು ಕಳುಹಿಸಿದ್ದು ಏರ್ಪೋರ್ಟ್ನಲ್ಲಿ ಕಸ್ಟಮ್ಸ್ ಸುಂಕ ಪಾವತಿಸದ ಕಾರಣ ತಡೆ ಹಿಡಿಯಲಾಗಿದೆ ಎಂದು ಹೇಳಿದ್ದ. ಅಲ್ಲದೇ ನಾನು ಭಾರತಕ್ಕೆ ಬರುತ್ತಿದ್ದಂತೆಯೇ ಬ್ರಿಟನ್ಗೆ ಕೊಂಡೊಯ್ಯುವುದಾಗಿ ಭರವಸೆ ನೀಡಿದ್ದ ಎನ್ನಲಾಗಿದೆ.
ಸಂತ್ರಸ್ತೆಯ ವಿಶ್ವಾಸವನ್ನು ಗಳಿಸಿಕೊಂಡ ಆರೋಪಿಯು ಆಕೆಯ ಬ್ಯಾಂಕ್ ವಿವರಗಳು ಹಾಗೂ ಡೆಬಿಟ್ ಕಾರ್ಡ್ ವಿವರಗಳನ್ನು ಪಡೆದುಕೊಂಡಿದ್ದ ಎನ್ನಲಾಗಿದೆ. ವೃದ್ಧೆಯು ಬ್ಯಾಂಕ್ ಖಾತೆಗೆ ಹಣವನ್ನು ಜಮೆ ಮಾಡಲು ಹೋಗಿದ್ದಾಗ ಖಾತೆಯಿಂದ ಹಣ ವರ್ಗಾವಣೆ ಆಗಿರುವುದು ವೃದ್ಧೆಯ ಗಮನಕ್ಕೆ ಬಂದಿದೆ ಎನ್ನಲಾಗಿದೆ.
ಈ ಬಗ್ಗೆ ಆರೋಪಿಯ ಬಳಿ ಸಂತ್ರಸ್ತೆ ಕೇಳಿದಾಗ ನನ್ನ ಸ್ನೇಹಿತನಿಗೆ ತುರ್ತಾಗಿ ಹಣ ಬೇಕಾಗಿದ್ದಕ್ಕೆ ನೀಡಿದ್ದಾಗಿ ಹೇಳಿದ್ದಾನೆ. ಆದರೆ ಆತನ ನಡೆಯಿಂದ ಅನುಮಾನಗೊಂಡ ವೃದ್ಧೆಯು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.