ಬೆಂಗಳೂರು: ಕಂದಾಯ ದಾಖಲೆ ಮನೆಬಾಗಿಲಿಗೆ ಯೋಜನೆಯಡಿ ರಾಜ್ಯದ 45 ಲಕ್ಷ ರೈತರಿಗೆ ಉಚಿತವಾಗಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆರ್ಟಿಸಿ, ಅಟ್ಲಾಸ್ ಗಳನ್ನು ಮಾರ್ಚ್ 12 ರಂದು ವಿತರಣೆ ಮಾಡಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ಜೆಡಿಎಸ್ ಸದಸ್ಯ ಗೋವಿಂದರಾಜು ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಏಕಕಾಲದಲ್ಲಿ ರಾಜ್ಯದ್ಯಂತ ಕಂದಾಯ ದಾಖಲೆಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸಲಾಗುವುದು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರು, ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರು, ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ತಹಶೀಲ್ದಾರ್ ಗಳು ಯೋಜನೆಗೆ ಚಾಲನೆ ನೀಡಲಿದ್ದಾರೆ ಎಂದರು.
ಪ್ರತಿ 5 ವರ್ಷಗಳಿಗೊಮ್ಮೆ ಕಂದಾಯ ದಾಖಲೆಗಳನ್ನು ರೈತರಿಗೆ ಉಚಿತವಾಗಿ ನೀಡಲು ಕಾನೂನಿನಲ್ಲಿ ಅವಕಾಶವಿದೆ. ಪಹಣಿ. ಮ್ಯುಟೇಷನ್ ಪ್ರತಿಗಳ ವಿತರಣೆಯಿಂದ ಐದು ವರ್ಷದಲ್ಲಿ 173.09 ಕೋಟಿ ರೂಪಾಯಿ ಆದಾಯ ಬಂದಿದೆ ಎಂದು ಅವರು ತಿಳಿಸಿದ್ದಾರೆ.
11ಇ ನಕ್ಷೆಗಳನ್ನು ರೈತರೇ ಸಿದ್ಧಪಡಿಸಿಕೊಳ್ಳಲು ಅವಕಾಶ ಕಲ್ಪಿಸುವ ಕುರಿತಾಗಿ ಸಾಫ್ಟ್ವೇರ್ ಅಭಿವೃದ್ಧಿಪಡಿಸಲಾಗುತ್ತಿದೆ. ರೈತರು ಸಿದ್ಧಪಡಿಸಿದ 11ಇ ನಕ್ಷೆಗಳನ್ನು ತಂತ್ರಾಂಶದ ಮೂಲಕ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಿ ಇದನ್ನು ಆಧರಿಸಿ ಉಪನೊಂದಣಾಧಿಕಾರಿಗಳು ವಿಭಾಗ ಪತ್ರಗಳನ್ನು ನೊಂದಣಿ ಮಾಡಿಕೊಡಲಿದ್ದಾರೆ. ರೈತರು ತಮ್ಮ ಜಮೀನುಗಳ ಗಡಿ ಗುರುತಿಸಿ ವಿಭಾಗ ಮಾಡಿಕೊಳ್ಳುವಂತಹ ವ್ಯವಸ್ಥೆ ಇದಾಗಿರುತ್ತದೆ ಎಂದು ಹೇಳಿದ್ದಾರೆ.