ಮೈಸೂರು: ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಮತ್ತು ಜೆಡಿಎಸ್ ಕಾರ್ಯಕರ್ತರ ಜಟಾಪಟಿ ಮುಂದುವರೆದಿದೆ. ಮುಂಜನಹಳ್ಳಿಯಲ್ಲಿ ಸುಮಲತಾ ಅವರೊಂದಿಗೆ ಕಾರ್ಯಕರ್ತರು ವಾಗ್ವಾದ ನಡೆಸಿದ್ದಾರೆ.
ಮೈಸೂರು ಜಿಲ್ಲೆ ಕೆಆರ್ ನಗರ ತಾಲ್ಲೂಕಿನ ಮುಂಜನಹಳ್ಳಿ ಗ್ರಾಮದಲ್ಲಿ ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಜೆಡಿಎಸ್ ಕಾರ್ಯಕರ್ತರು ಧಿಕ್ಕಾರ ಕೂಗಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಸುಮಲತಾ ಪರವಾಗಿ ಜೈಕಾರ ಹಾಕಿದ್ದಾರೆ. ಈ ವೇಳೆ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ.
50 ಲಕ್ಷ ರೂಪಾಯಿ ವೆಚ್ಚದ ನೀರಾವರಿ, ಚರಂಡಿ, ರಸ್ತೆಗಳ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆಗೆ ಸಂದೆ ಸುಮಲತಾ ಅವರು ಆಗಮಿಸಿದ್ದು, ಸ್ಥಳೀಯ ಶಾಸಕ ಸಾ.ರಾ. ಮಹೇಶ್ ಅವರನ್ನು ಬಿಟ್ಟು ಪೂಜೆ ಮಾಡಲಾಗುತ್ತಿದೆ ಎಂದು ಜೆಡಿಎಸ್ ಕಾರ್ಯಕರ್ತರಿಂದ ವಿರೋಧ ವ್ಯಕ್ತವಾಗಿದೆ.
ಸಂಸದರು ಶಿಷ್ಟಚಾರ ಉಲ್ಲಂಘಿಸಿದ್ದಾರೆ ಎಂದು ಜೆಡಿಎಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದು, ಶಾಸಕರನ್ನು ಬಿಟ್ಟು ಗುದ್ದಲಿ ಪೂಜೆ ಮಾಡಲು ಬಿಡುವುದಿಲ್ಲವೆಂದು ಹೇಳಿದ್ದಾರೆ. ಗ್ರಾಮದ ಮಹಿಳೆಯನ್ನು ಸೇರಿಸಿ ಸಂಸದರು ಗುದ್ದಲಿ ಪೂಜೆ ನೆರವೇರಿಸಿದ್ದಾರೆ.