ಬಡಪಾಯಿ ಉಕ್ರೇನ್ ಮೇಲೆ ಆಕ್ರಮಣ ಮಾಡಿದ ರಷ್ಯಾ ವಿರುದ್ಧ ವಿಶ್ವಾದ್ಯಂತ ಭಾರಿ ಪ್ರತಿಭಟನೆ, ಆಕ್ರೋಶ ವ್ಯಕ್ತವಾಗುತ್ತಿದೆ. ಸ್ವತಃ ರಷ್ಯಾದಲ್ಲಿಯೇ ಜನ ತಮ್ಮ ದೇಶದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ರಷ್ಯಾದ 50 ನಗರಗಳಲ್ಲಿ ಪ್ರತಿಭಟನೆ ವ್ಯಕ್ತವಾಗಿದೆ. ಇದೇ ರೀತಿ ಫ್ರಾನ್ಸ್‌ನಲ್ಲಿಯೂ ಹಲವೆಡೆ ಪ್ರತಿಭಟನೆ ನಡೆದಿದೆ.
ಆದರೆ, ಅಂತಾರಾಷ್ಟ್ರೀಯ ಮಹಿಳಾ ಹಕ್ಕುಗಳ ಪರ ಸಂಘಟನೆಯಾದ ’ಫೆಮೆನ್’ನ ಸದಸ್ಯೆಯರು ಮಾತ್ರ ವಿಚಿತ್ರವಾಗಿ ಪ್ರತಿಭಟನೆ ನಡೆಸಿ ಗಮನ ಸೆಳೆದಿದ್ದಾರೆ. ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನಲ್ಲಿರುವ ಐಫೆಲ್ ಟವರ್ ಎದುರು ಜಮಾಯಿಸಿದ ಫೆಮೆನ್ ಸಂಘಟನೆಯ 50ಕ್ಕೂ ಅಧಿಕ ಮಹಿಳೆಯರು ಟಾಪ್‌ಲೆಸ್ ಆಗಿದ್ದು, ಇಡೀ ದೇಹಕ್ಕೆ ಉಕ್ರೇನ್ ಧ್ವಜದ ಬಣ್ಣ ಬಳಿದುಕೊಂಡು ಪುಟಿನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪುಟಿನ್ ಅವರೇ ಯುದ್ಧ ನಿಲ್ಲಿಸಿ, ಪುಟಿನ್ ಯುದ್ಧಾಪರಾಧಿ ಎಂಬ ಘೋಷಣೆ ಕೂಗುವ ಮೂಲಕ ಜಾಗತಿಕ ಆಕ್ರೋಶಕ್ಕೆ ಧ್ವನಿಗೂಡಿಸಿದ್ದಾರೆ.
ಉಕ್ರೇನ್‌ನಲ್ಲಿ ಜನ ಸ್ವಾತಂತ್ರ್ಯಕ್ಕಾಗಿ ಹೋರಾಡುವುದು ಸಹ ಅಪರಾಧವಾದಂತಾಗಿದೆ. ಅವರ ಆಸೆಯು ಸ್ವತಂತ್ರ ಹಾಗೂ ಸಾರ್ವಭೌಮ ದೇಶದಲ್ಲಿ ಬದುಕುವುದಾಗಿದ್ದು, ಜಾಗತಿಕ ಸಮುದಾಯವು ಅವರ ಬದುಕನ್ನು ಮತ್ತೆ ಕಟ್ಟಿಕೊಡಬೇಕು. ಉಕ್ರೇನ್ ಮೇಲೆ ಮಾತ್ರವಲ್ಲ ಪ್ರಜಾಪ್ರಭುತ್ವದ ಮೇಲೆಯೇ ಪುಟಿನ್ ದಾಳಿ ಮಾಡಿದ್ದಾರೆ. ಕೂಡಲೇ ಜಾಗತಿಕ ಸಮುದಾಯಗಳು ಬಿಕ್ಕಟ್ಟು ಶಮನಗೊಳಿಸಬೇಕು ಎಂದು ಫೆಮೆನ್ ಪ್ರಕಟಣೆ ತಿಳಿಸಿದೆ.
ಮಹಿಳೆಯರ ಹಕ್ಕುಗಳ ರಕ್ಷ ಣೆಗಾಗಿ 2008ರಲ್ಲಿಯೇ ಫೆಮೆನ್ ಸಂಘಟನೆಯನ್ನು ಸ್ಥಾಪಿಸಲಾಗಿದ್ದು, ಇದೀಗ ಜಾಗತಿಕ ಸಂಸ್ಥೆಯಾಗಿ ಮಾರ್ಪಾಡಾಗಿದೆ. ಉಕ್ರೇನ್ ನಲ್ಲಿ ಹೆಣ್ಣುಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯದ ವಿರುದ್ಧ ಹೋರಾಡಲು ಹುಟ್ಟುಹಾಕಿದ ಸಂಘಟನೆಯು ಈಗ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಹೆಣ್ಣುಮಕ್ಕಳಿಗೆ ಧ್ವನಿಯಾಗಿದೆ.