ಸಂತ್ರಸ್ತರ ಕುಟುಂಬ ಪಡೆದ ಪರಿಹಾರವನ್ನು ಆದಾಯವೆಂದು ಕರೆಯಬಹುದೇ ಅಂತಾ ಗುಜರಾತ್ ಹೈಕೋರ್ಟ್ ಆದಾಯ ತೆರಿಗೆ ಇಲಾಖೆಯನ್ನು ಪ್ರಶ್ನಿಸಿದೆ. ಈ ಪರಿಹಾರ ಮೊತ್ತ ತೆರಿಗೆಗೆ ಒಳಪಡುತ್ತದೆಯೇ ಎಂದು ಕೇಳಿದೆ.
1986ರಲ್ಲಿ ಪ್ಯಾನ್ ಅಮೇರಿಕನ್ ವರ್ಲ್ಡ್ ಏರ್‌ವೇಸ್ ವಿಮಾನವನ್ನು ಹೈಜಾಕ್ ಮಾಡುವಾಗ ಸಾವನ್ನಪ್ಪಿದ ಮಹಿಳೆಯ ಪತಿ ಸಲ್ಲಿಸಿದ ಮನವಿಯನ್ನು ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ. ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ನಿಶಾ ಠಾಕೂರ್ ಅವರಿದ್ದ ವಿಭಾಗೀಯ ಪೀಠವು ಐಟಿ ಇಲಾಖೆಗೆ ಈ ಸಂಬಂಧ ಪ್ರಶ್ನೆ ಕೇಳಿದೆ.
ಪರಿಹಾರವಾಗಿ ಪಡೆದ ಮೊತ್ತವನ್ನು ಕಾಯಿದೆಯಡಿ ತೆರಿಗೆ ವಿಧಿಸುವ ಆದಾಯ ಎಂದು ಕರೆಯಬಹುದೇ ಎಂದು ಪ್ರಶ್ನಿಸಿದೆ.”ಈ ಪರಿಹಾರವು ಆದಾಯವಲ್ಲ ಹಾಗಾಗಿ ತೆರಿಗೆ ವಿಧಿಸಲಾಗುವುದಿಲ್ಲ ಎಂಬುದು ನಿಮ್ಮ ವಾದ. ಆದ್ರೆ ಸಹಾನುಭೂತಿಯನ್ನು ಬದಿಗಿರಿಸಿ ಯೋಚಿಸಿದ್ರೆ ಪರಿಹಾರದ ಮೂಲಕ ಪಡೆದಿದ್ದನ್ನು ಆದಾಯ ಎಂದು ಕರೆಯಬಹುದೇ ಎಂಬ ಪ್ರಶ್ನೆ ಕೂಡ ಅರ್ಥಪೂರ್ಣವಾಗಿದೆ” ಅಂತಾ ಕೋರ್ಟ್ ಹೇಳಿದೆ. ವಿಚಾರಣೆಯನ್ನು ಮಾರ್ಚ್ 14ಕ್ಕೆ ಮುಂದೂಡಿದೆ.
ವಿಮಾನ ಹೈಜಾಕ್ ಪ್ರಕರಣದಲ್ಲಿ ಪತ್ನಿ ತೃಪ್ತಿಯನ್ನು ಕಳೆದುಕೊಂಡಿದ್ದ ಕಲ್ಪೇಶ್ ದಲಾಲ್ ಎಂಬುವವರಿಗೆ 20 ಕೋಟಿ ರೂಪಾಯಿ ಪರಿಹಾರ ಸಿಕ್ಕಿತ್ತು. ಈ ಮೊತ್ತಕ್ಕೆ ಆದಾಯ ತೆರಿಗೆ ಪಾವತಿಸುವಂತೆ ಐಟಿ ಇಲಾಖೆ ನೋಟಿಸ್ ನೀಡಿದೆ. ಹಾಗಾಗಿ ಕಲ್ಪೇಶ್ ಗುಜರಾತ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಪತ್ನಿ ಭಯೋತ್ಪಾದಕರ ಗುಂಡಿಗೆ ಬಲಿಯಾಗಿದ್ದಾಳೆ, ಹಾಗಾಗಿ ಪರಿಹಾರ ಮೊತ್ತ ಆದಾಯ ತೆರಿಗೆಯಡಿ ಬರುವುದಿಲ್ಲ ಅಂತಾ ವಾದಿಸಿದ್ದಾರೆ. ಹೈಜಾಕರ್ ಗಳು ಒಟ್ಟು 50 ಮಂದಿಯನ್ನು ಹತ್ಯೆ ಮಾಡಿದ್ದರು. ಬಳಿಕ 2013-15ರ ಅವಧಿಯಲ್ಲಿ ಕಲ್ಪೇಶ್ ಗೆ ನ್ಯೂಯಾರ್ಕ್ ನ ಕೋರ್ಟ್ 20 ಕೋಟಿ ರೂಪಾಯಿ ಪರಿಹಾರ ಮಂಜೂರು ಮಾಡಿತ್ತು. ಇದನ್ನು ಕಲ್ಪೇಶ್ ತಮ್ಮ ಆದಾಯದಲ್ಲಿ ನಮೂದಿಸಿರಲಿಲ್ಲ.