ಮುಂಬೈನ ಪೊಲೀಸ್ ಸಬ್ಇನ್ಸ್ಪೆಕ್ಟರ್ ಒಬ್ಬರು ತಾವು ಹಿರಿಯ ಭ್ರಷ್ಟ ಅಧಿಕಾರಿಗಳಿಂದ ಕಿರುಕುಳ ಹಾಗೂ ತೊಂದರೆ ಅನುಭವಿಸುತ್ತಿರುವುದಾಗಿ ಪತ್ರದ ಮೂಲಕ ಆರೋಪಿಸಿದ್ದಾರೆ. ಅಧಿಕಾರಿಯನ್ನು ಮನೇಶ್ ಎಂದು ಗುರುತಿಸಲಾಗಿದ್ದು ಇಬರು ಕಲಾಂಬೋರಿ ಠಾಣೆಗೆ ಸೇರಿದವರಾಗಿದ್ದಾರೆ. ಮನೇಶ್ ಶನಿವಾರದಿಂದ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.
ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿ ಮನೇಶ್, ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹಾಗೂ ಪೊಲೀಸ್ ಮಹಾನಿರ್ದೇಶಕ ರಜನೀಶ್ ಸೇಠ್ರಿಗೆ ಪತ್ರ ಬರೆದಿದ್ದಾರೆ.
ಕಲಾಂಬೋಲಿ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್ಪೆಕ್ಟರ್ ಭ್ರಷ್ಟರಾಗಿದ್ದು ವಸೂಲಿಯ ಟಾರ್ಗೆಟ್ನ್ನು ತಲುಪುವಂತೆ ನಮಗೆ ಕಿರುಕುಳ ನೀಡುತ್ತಿದ್ದಾರೆ. ಇದರಿಂದ ನಮಗೆ ಮಾನಸಿಕವಾಗಿ ಆಘಾತವುಂಟಾಗುತ್ತಿದೆ ಎಂದು ಮನೇಶ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೇ ತಮ್ಮನ್ನು ಕಲಂಬೋಲಿ ಠಾಣೆಯಿಂದ ವರ್ಗಾವಣೆ ಮಾಡಲಾಗಿದೆ ಎಂದೂ ಹೇಳಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಯ ಆಸ್ತಿಯ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ ಹಾಗೂ ಕಲಾಂಬೋಲಿ ಠಾಣೆಯಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳ ಬಗ್ಗೆಯೂ ತನಿಖೆ ನಡೆಸುವಂತೆ ಕೋರಿದ್ದರು.
ಮನೇಶ್ರ ಈ ಪತ್ರವು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ಕಲಂಬೋಲಿ ಪೊಲೀಸರು ಮನೇಶ್ಗಾಗಿ ಹುಡುಕಾಟ ನಡೆಸಿದ್ದಾರೆ. ಆದರೆ ಮನೇಶ್ ಮಾತ್ರ ಕಣ್ಮರೆಯಾಗಿದ್ದಾರೆ ಎನ್ನಲಾಗಿದೆ.