ಹಣಕ್ಕಾಗಿ ಎಂತಾ ಕೆಲಸಕ್ಕು ಇಳಿಯುತ್ತಾರೆ. ಸಂಬಂಧಿಕರಾಗಲಿ, ಸ್ನೇಹಿತರಾಗಲಿ ಯಾರನ್ನು ಬಿಡುವುದಿಲ್ಲ. ಅಂತಹದ್ದೇ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ತಾಯಿ ಸಾಲ ಕೊಡಲಿಲ್ಲ ಎಂದು ಆಕೆಯ ಮಗನನ್ನೇ ಕಿಡ್ನಾಪ್ ಮಾಡಿದ್ದಾರೆ.
ಸಧ್ಯ ಅಪಹರಣಗೊಂಡಿದ್ದ ಸಂತ್ರಸ್ತನನ್ನು ವಿದ್ಯಾರಣ್ಯಪುರ ಪೊಲೀಸರು ರಕ್ಷಿಸಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆ ಕೇವಲ 12 ಗಂಟೆಯಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ರವಿ, ಮಾದೇಶ್, ಶ್ರೀನಿವಾಸ್ ಬಂಧಿತರು.
ಕಿಡ್ನಾಪ್ ಆಗಿದ್ದ ಯುವಕನನ್ನು ಪವನ್ ಎಂದು ಗುರುತಿಸಲಾಗಿದೆ. ಪ್ರಸ್ತುತ ಬಿಕಾಂ ಪದವಿ ಓದುತ್ತಿರುವ ಪವನ್ ನನ್ನು ಸಾಲ ನೀಡಲಿಲ್ಲ ಎಂದು ಆತನ ಪಕ್ಕದ ಮನೆಯ ಪರಿಚಯಸ್ಥರೆ ಕಿಡ್ನಾಪ್ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಬಂಧಿತ ಆರೋಪಿಗಳು ಅಪ್ಪ ಮಕ್ಕಳೆಂದು ತಿಳಿದು ಬಂದಿದ್ದು, ಬಂಧಿತ ತಂದೆ ರವಿ ಇಡೀ ಕೃತ್ಯದ ಮಾಸ್ಟರ್ ಮೈಂಡ್ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಪಹರಣಗೊಂಡಿದ್ದ ಪವನ್ ತಂದೆ, ಕಳೆದ ವರ್ಷ ಮೃತರಾಗಿದ್ರು. ಅವರ ಹೆಸರಲ್ಲಿ ಇಪ್ಪತ್ತು ಗುಂಟೆ ಜಮೀನಿದೆ, ಅದನ್ನು ಮಾರಲು ಪವನ್ ತಾಯಿ ಶಾಂತಮ್ಮ ಪ್ರಯತ್ನಿಸುತ್ತಿದ್ರು. ಇದನ್ನು ಗಮನಿಸಿದ ಬಂಧಿತ ಆರೋಪಿ ರವಿ, ಶಾಂತಮ್ಮರ ಬಳಿ ಸಾಲ ಕೇಳಿದ್ದ. ಆದರೆ ಶಾಂತಮ್ಮ ಹಣ ಇಲ್ಲವೆಂದು ನಿರಾಕರಿಸಿದ್ದಾರೆ.
ಶಾಂತಮ್ಮ ಅವರು ಸಾಲ ನೀಡಲು ಆಗುವುದಿಲ್ಲ ಎಂದು ಎಷ್ಟೇ ಬಾರಿ ನಿರಾಕರಿಸಿದ್ರು, ತುಂಬಾ ಕಷ್ಟದಲ್ಲಿದ್ದೇನೆ ಏಳು ಲಕ್ಷ ಸಾಲ ನೀಡಿ ಎಂದು ರವಿ ಪೀಡಿಸಿದ್ದಾನೆ. ಕಳೆದ ಮೂರು ತಿಂಗಳಿಂದ ರವಿಯ ಕಾಟ ಹೆಚ್ಚಾಗುತ್ತಲೇ ಇತ್ತು. ಇದರಿಂದ ಬೇಸತ್ತ ಶಾಂತಮ್ಮ , ಒಂದಿನ ಸಾಲ ಕೊಡುವುದಿಲ್ಲಾ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ. ಇದರಿಂದ ಕ್ರೋಧಗೊಂಡ ರವಿ, ತನ್ನ ಮಕ್ಕಳಾದ ಮಾದೇಶ್ ಹಾಗೂ ಶ್ರೀನಿವಾಸ್ ನೊಂದಿಗೆ ಸೇರಿ ಪವನ್ ನನ್ನು ಅಪಹರಿಸಿ ಏಳು ಲಕ್ಷ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾನೆ.
ಮಾರ್ಚ್ 6ನೇ ತಾರೀಖಿನಂದು ವಿದ್ಯಾರಣ್ಯಪುರದ, ಟೀಚರ್ಸ್ ಕಾಲೋನಿಯಲ್ಲಿ ಅಪಹರಣ ನಡೆದಿದೆ. ಇನ್ನು ಗಮನಿಸಬೇಕಾದ ಅಂಶವೆಂದರೆ ಪವನ್ ಹಾಗೂ ಮಾದೇಶ್ ಬಾಲ್ಯ ಸ್ನೇಹಿತರಾಗಿದ್ರು. ಆದರೆ ಹಣಕ್ಕಾಗಿ ಸ್ನೇಹಿತನನ್ನೆ ಕಿಡ್ನಾಪ್ ಮಾಡಿದ ಅಪ್ಪ-ಮಕ್ಕಳು ಕಂಬಿ ಎಣಿಸುತ್ತಿದ್ದಾರೆ.