ಕೀವ್ನಲ್ಲಿ ಬುಲೆಟ್ ದಾಳಿಗೊಳಗಾಗಿದ್ದ ಭಾರತೀಯ ವಿದ್ಯಾರ್ಥಿ ಹರ್ಜೋತ್ ಸಿಂಗ್ರನ್ನು ಉಕ್ರೇನ್ನ ರಾಜಧಾನಿಯಿಂದ ರಸ್ತೆ ಮಾರ್ಗವಾಗಿ 700 ಕಿಲೋಮೀಟರ್ ದೂರದಲ್ಲಿರುವ ಗಡಿಗೆ ಕರೆತರಲಾಯಿತು. ಇಲ್ಲಿಂದ ಹರ್ಜೋತ್ ಸಿಂಗ್ ವಿಮಾನವನ್ನು ಹತ್ತಿ ಸ್ವದೇಶಕ್ಕೆ ಬಂದಿಳಿದಿದ್ದಾರೆ.
31 ವರ್ಷದ ಹರ್ಜೋತ್ ಸಿಂಗ್ ನಿನ್ನೆ ಸಂಜೆ ಸುಮಾರಿಗೆ ದೆಹಲಿ ಬಳಿಯ ಹಿಂಡನ್ ಏರ್ಫೋರ್ಸ್ ಸ್ಟೇಷನ್ಗೆ ಭಾರತೀಯ ವಾಯುಪಡೆಗೆ ಸೇರಿದ ಸಿ 17 ವಿಮಾನದಲ್ಲಿ ಬಂದಿಳಿದರು. ಇದು ಪೊಲೆಂಡ್ನಿಂದ ಇತರೆ ಭಾರತೀಯರನ್ನೂ ಹೊತ್ತು ತಂದಿದೆ.
ಹರ್ಜೋತ್ ಸಿಂಗ್ರನ್ನು ಕೀವ್ನಿಂದ ಸ್ಥಳಾಂತರಿಸುವ ವೇಳೆಯಲ್ಲಿ ಎದುರಾದ ಎಲ್ಲಾ ಸವಾಲುಗಳನ್ನು ಭಾರತೀಯ ರಾಯಭಾರ ಕಚೇರಿಯು ಸರಣಿ ಟ್ವೀಟ್ಗಳ ಮೂಲಕ ವಿವರಿಸಿದೆ.
ಹರ್ಜೋತ್ರನ್ನು ಮನೆಗೆ ಕರೆತರಲಾಗುತ್ತಿದೆ. ಕೀವ್ನಲ್ಲಿ ಗುಂಡಿನ ದಾಳಿಗೆ ಒಳಗಾಗಿದ್ದ ಭಾರತೀಯ ವಿದ್ಯಾರ್ಥಿ ಹರ್ಜೋತ್ ಸಿಂಗ್ ರನ್ನು ಯುದ್ಧ ವಲಯಗಳಲ್ಲಿ 700 ಕಿಮೀಗಿಂತಲೂ ಅಧಿಕ ದೂರ ಯಶಸ್ವಿಯಾಗಿ ಸ್ಥಳಾಂತರಿಸಲಾಯಿತು. ಅವರು ಐ ಎಫ್ ಸಿ 17 ಎಸಿ ವಿಮಾನದ ಮೂಲಕ ಪೊಲೆಂಡ್ನಿಂದ ಭಾರತಕ್ಕೆ ತೆರಳಿದ್ದಾರೆ ಎಂದು ರಾಯಭಾರ ಕಚೇರಿ ಟ್ವೀಟ್ ಮಾಡಿದೆ.
ಮತ್ತೊಂದು ಪೋಸ್ಟ್ನಲ್ಲಿ ರಾಯಭಾರ ಕಚೇರಿಯು ಸಿಂಗ್ರನ್ನು ಕೀವ್ನಿಂದ ಬೋಡೋಮಿಯರ್ಜ್ ಗಡಿಗೆ ಸಾಗಿಸಿದ ಚಾಲಕನನ್ನು ಶ್ಲಾಘಿಸಿದೆ.
ಶೆಲ್ ದಾಳಿ, ಇಂಧನ ಕೊರತೆ ಅಲ್ಲಲ್ಲಿ ರಸ್ತೆ ತಡೆಗಳು, ಟ್ರಾಫಿಕ್ ಜಾಮ್ಗಳೆಂಬ ಸಾಕಷ್ಟು ನಿರ್ಬಂಧಗಳ ನಡುವೆಯೂ ಕೀವ್ನಿಂದ ಬೊಡೊಮಿಯೆರ್ಜ್ ಗಡಿಗೆ ಬರೋಬ್ಬರಿ 700 ಕಿಲೋಮೀಟರ್ ದೂರವನ್ನು ಯಶಸ್ವಿಯಾಗಿ ಕ್ರಮಿಸಿದ್ದಾರೆ. ಹರ್ಜೋತ್ರನ್ನು ಯಶಸ್ವಿಯಾಗಿ ವರ್ಗಾಯಿಸಿದ ಭಾರತೀಯ ರಾಯಭಾರ ಕಚೇರಿಯ ಚಾಲಕನಿಗೆ ಧನ್ಯವಾದಗಳು ಎಂದು ಮತ್ತೊಂದು ಟ್ವೀಟ್ ಮಾಡಲಾಗಿದೆ.