ಮರಗಿಡಗಳು ಮಾನವ ಜೀವನದ ಆಧಾರ. ಎಲ್ಲರ ಉಸಿರಾಟಕ್ಕೆ ಮೂಲ. ಆಮ್ಲಜನಕ ಪೂರೈಕೆಯ ಮೂಲಕ ಎಲ್ಲಾ ಜೀವಿಗಳ ಬದುಕಿಗೆ ಕಾರಣವಾದ ಸಸ್ಯಗಳೇ ನಿಮಗೆ ಮಾರಕವಾಗಲೂಬಹುದು. ಪ್ರಪಂಚದಲ್ಲಿ ಕೆಲವೇ ಕೆಲವು ವಿಚಿತ್ರ ಸಸ್ಯಗಳಿವೆ. ಅವುಗಳನ್ನು ಸ್ಪರ್ಷಿಸಿದರೂ ಪ್ರಾಣ ಹೋಗಬಹುದು. ಅವು ಯಾವುದು ಅನ್ನೋದನ್ನು ನೋಡೋಣ.
ಹಾಗ್ವೀಡ್ : ಈ ಸಸ್ಯವನ್ನು ಹೆರಾಕ್ಲಿಯಮ್ ಮಾಂಟೇಜಿಯಮ್ ಎಂದು ಕರೆಯಲಾಗುತ್ತದೆ. ಇದರ ಹೂವು ಅತ್ಯಂತ ವಿಷಕಾರಿ. ಆ ಹೂವನ್ನು ಮುಟ್ಟಿದರೆ ಚರ್ಮದ ಮೇಲೆ ಗಾಯ ಮಾಡಿಬಿಡುತ್ತದೆ. ಚರ್ಮದ ಕ್ಯಾನ್ಸರ್ ಗೂ ಈ ಹೂವುಗಳು ಕಾರಣವಾಗಬಹುದು.
ರಿಕಿನಸ್ ಕಮ್ಯುನಿಸ್ : ಅತ್ಯಂತ ಅಪಾಯಕಾರಿಯಾಗಿರೋ ಈ ಗಿಡವನ್ನು ರಿಸಿನ್ ಎಂದೂ ಕರೆಯುತ್ತಾರೆ. ಈ ಪೊದೆ ಮಾನವ ದೇಹದ ಜೀವಕೋಶಗಳನ್ನು ತೊಡೆದು ಹಾಕುತ್ತದೆ. ಇದರಿಂದ ಮೊದಲು ವಾಂತಿ ಮತ್ತು ಅತಿಸಾರ ಉಂಟಾಗಬಹುದು. ಕೆಲವೊಮ್ಮೆ ಇದು ಮಾರಣಾಂತಿಕವಾಗಿಯೂ ಪರಿಣಮಿಸುತ್ತದೆ.
ಮಂಚಿನೀಲ್ : ಫ್ಲೋರಿಡಾ ಮತ್ತು ಕೆರಿಬಿಯನ್ ದ್ವೀಪಗಳಲ್ಲಿ ಕಂಡುಬರುವ ಮಂಚಿನೀಲ್ ಸಸ್ಯವು ತುಂಬಾ ಅಪಾಯಕಾರಿಯಾಗಿದೆ. ಇದನ್ನು ಹಿಪ್ಪೋಮನೆ ಮ್ಯಾನ್ಸಿನಿಲ್ಲಾ ಎಂದೂ ಕರೆಯುತ್ತಾರೆ. ಈ ಗಿಡದ ಮೇಲೆ ಬೀಳುವ ನೀರನ್ನು ಯಾರಾದರೂ ಮುಟ್ಟಿದರೆ ಪ್ರಾಣ ಕಳೆದುಕೊಳ್ಳಬಹುದು. ಈ ಸಸ್ಯವನ್ನು ಸುಟ್ಟ ನಂತರ, ಅದರ ಹೊಗೆ ವ್ಯಕ್ತಿಯನ್ನು ಕುರುಡನನ್ನಾಗಿ ಮಾಡಬಹುದು. ಇದರೊಂದಿಗೆ ಉಸಿರಾಟದ ಕಾಯಿಲೆ ಬರುವ ಅಪಾಯವೂ ಇದೆ.
ಅಬ್ರಿನ್ : ಅಪಾಯಕಾರಿ ಸಸ್ಯಗಳ ಪಟ್ಟಿಯಲ್ಲಿ ಅಬ್ರಿನ್ ಕೂಡ ಸೇರಿದೆ. ಇದು ಕೆಂಪು ಬೆರ್ರಿಯಂತೆ ಕಾಣಿಸುತ್ತೆ. ಇದರ ಹಣ್ಣಿನ ಬೀಜಗಳು ತುಂಬಾ ಅಪಾಯಕಾರಿ. ಅದನ್ನು ತಿಂದರೆ ಸತ್ತೇ ಹೋಗಬಹುದು.