ಉಕ್ರೇನ್ನ ರಾಜಧಾನಿ ಕೀವ್ನಲ್ಲಿ ಗುಂಡಿನ ದಾಳಿಗೆ ಒಳಗಾಗಿದ್ದ ವಿದ್ಯಾರ್ಥಿ ಹರ್ಜೋತ್ ಸಿಂಗ್ ಆಪರೇಷನ್ ಗಂಗಾ ಯೋಜನೆಯ ಅಡಿಯಲ್ಲಿ ಇಂದು ತಾಯ್ನಾಡಿಗೆ ಮರಳಲಿದ್ದಾರೆ ಎಂದು ಕೇಂದ್ರ ಸಚಿವ ವಿ.ಕೆ. ಸಿಂಗ್ ಮಾಹಿತಿ ನೀಡಿದ್ದಾರೆ. ಉಕ್ರೇನ್ – ರಷ್ಯಾ ಯುದ್ಧ ಬಿಕ್ಕಟ್ಟಿನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳ ರಕ್ಷಣೆಗಾಗಿ ಪ್ರಸ್ತುತ ಕೇಂದ್ರ ಸಚಿವ ವಿ.ಕೆ. ಸಿಂಗ್ ಪೋಲೆಂಡ್ನಲ್ಲಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಕೇಂದ್ರ ಸಚಿವ ವಿ.ಕೆ. ಸಿಂಗ್, ಯುದ್ಧದ ಸಂದರ್ಭದಲ್ಲಿ ಗುಂಡಿನ ದಾಳಿಗೆ ಒಳಗಾಗಿದ್ದ ಭಾರತೀಯ ವಿದ್ಯಾರ್ಥಿ ತಮ್ಮ ಪಾಸ್ಪೋರ್ಟ್ನ್ನೂ ಕಳೆದುಕೊಂಡಿದ್ದರು. ಆದರೆ ಅವರು ನನ್ನೊಂದಿಗೆ ಸೋಮವಾರ ಭಾರತಕ್ಕೆ ಮರಳಲಿದ್ದಾರೆ ಎಂದು ತಿಳಿಸಲು ಸಂತೋಷಪಡುತ್ತೇನೆ.
ಮನೆಯ ಆಹಾರ ಹಾಗೂ ಮನೆಯವರ ಆರೈಕೆಯಿಂದ ಅವರು ಶೀಘ್ರವೇ ಚೇತರಿಸಿಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ ಅಂತಾ ಟ್ವೀಟ್ ಮಾಡಿದ್ದಾರೆ.
ಉಕ್ರೇನ್ ಹಾಗೂ ರಷ್ಯಾದ ನಡುವೆ ಯುದ್ಧ ನಡೆಯುತ್ತಿದ್ದ ಸಂದರ್ಭದಲ್ಲಿ ದೆಹಲಿ ಮೂಲದವರಾದ ಹರ್ಜೋತ್ ಸಿಂಗ್ ತಮ್ಮ ಸ್ನೇಹಿತರ ಜೊತೆ ಸೇರಿ ಭಾರತಕ್ಕೆ ಬರಲು ಯತ್ನಿಸುತ್ತಿದ್ದರು. ಆದರೆ ಟ್ರೇನಿನಲ್ಲಿ ಸ್ಥಳಾವಕಾಶ ಸಿಗದ ಕಾರಣ ಕ್ಯಾಬ್ ಮೂಲಕ ಪೊಲ್ಯಾಂಡ್ ಗಡಿಯನ್ನು ಮುಟ್ಟಬೇಕೆಂದು ನಿರ್ಧರಿಸಿದ್ದರು. ಆದರೆ ಕ್ಯಾಬ್ನ ಮೇಲೆ ಗುಂಡಿನ ದಾಳಿ ನಡೆದ ಕಾರಣ ಹರ್ಜೋತ್ ಸಿಂಗ್ ಗಾಯಗೊಂಡಿದ್ದರು.