ನವದೆಹಲಿ: ರಷ್ಯಾ -ಉಕ್ರೇನ್ ನಡುವೆ ಯುದ್ಧ ಮುಂದುವರೆದ ಹಿನ್ನೆಲೆಯಲ್ಲಿ ಆರಂಭಿಕ ವಹಿವಾಟಿನಲ್ಲಿ ಕಚ್ಚಾತೈಲದ ಬೆಲೆ ಶೇ. 9 ರಷ್ಟು ಏರಿಕೆ ಕಂಡಿದೆ. ಬೆಲೆಏರಿಕೆಯ ನಂತರ ಬ್ಯಾರೆಲ್ ಕಚ್ಚಾತೈಲದ ಬೆಲೆ 130 ಡಾಲರ್ ಗೆ ತಲುಪಿದೆ. ಜನವರಿ 1 ರಿಂದ ಇದುವರೆಗೆ ಕಚ್ಚಾತೈಲದ ಬೆಲೆ ಶೇಕಡ 65 ರಷ್ಟು ಏರಿಕೆಯಾಗಿದೆ.
ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ನಡೆಯುತ್ತಿದ್ದರೂ ಪರಿಣಾಮ ವಿಶ್ವದಾದ್ಯಂತ ಉಂಟಾಗಿದೆ. ಭಾರತದಲ್ಲೂ ಪರಿಣಾಮ ಬೀರಿದ್ದು, 14 ವರ್ಷಗಳಲ್ಲಿ ಮೊದಲ ಬಾರಿಗೆ ಕಚ್ಚಾ ತೈಲ ಪ್ರತಿ ಬ್ಯಾರೆಲ್‌ಗೆ 130 ಡಾಲರ್ ಗೆ ತಲುಪಿದೆ. ಇದರಿಂದ ಪೆಟ್ರೋಲ್ ಮತ್ತು ಡೀಸೆಲ್ ದುಬಾರಿಯಾಗುವ ನಿರೀಕ್ಷೆಯಿದೆ. ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಕೊನೆ ಹಂತದ ಮತದಾನ ಇಂದು ಮುಗಿದ ಕೂಡಲೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಹೆಚ್ಚಳವು ಲೀಟರ್‌ಗೆ 12 ರಿಂದ 22 ರೂ. ಆಗಲಿದ್ದು, ಶ್ರೀಸಾಮಾನ್ಯರ ಜೇಬಿಗೆ ದೊಡ್ಡ ಹೊರೆಯಾಗಲಿದೆ.
ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಮಾರ್ಚ್ 7 ಅಥವಾ ನಂತರ ಪ್ರಸ್ತುತ ಬೆಲೆಗಳನ್ನು ಪರಿಷ್ಕರಿಸಲಿವೆ ಎಂದು ಹೇಳಲಾಗುತ್ತಿದೆ. ಮಾರ್ಚ್ 7ರ ಸೋಮವಾರದಂದು ಮಾತ್ರ ಯುಪಿಯಲ್ಲಿ ಕೊನೆಯ ಹಂತದ ಮತದಾನ ನಡೆಯುತ್ತಿದೆ. ಆದರೆ, ಅಬಕಾರಿ ಸುಂಕ ಕಡಿತದಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಮೇಲೆ ಪರಿಣಾಮ ಸ್ವಲ್ಪ ಮಟ್ಟಿಗೆ ಕಡಿಮೆಯಾಗಬಹುದು, ಆದರೆ ಸಂಪೂರ್ಣವಾಗಿ ಅಲ್ಲ. ಪ್ರಸ್ತುತ, ಭಾರತ ತನ್ನ ಕಚ್ಚಾ ತೈಲದ ಶೇಕಡ 85 ರಷ್ಟು ಆಮದು ಮಾಡಿಕೊಳ್ಳುತ್ತದೆ.
ತೈಲ ಬೆಲೆ ಏರಿಕೆಯಾಗುತ್ತಿದ್ದಂತೆ ಸರಕು ಸಾಗಣೆ ದರವೂ ಏರಿಕೆಯಾಗಲಿದ್ದು, ಅಗತ್ಯ ವಸ್ತುಗಳ ಬೆಲೆ ಮೇಲೆ ಪರಿಣಾಮ ಬೀರುತ್ತದೆ.