ಬೆಂಗಳೂರು: ರೈತರಿಗೆ ಸರ್ಕಾರದಿಂದ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ಕಂದಾಯ ಮತ್ತು ಭೂಮಾಪನ ಇಲಾಖೆಯಿಂದ ಹೊಸ ಯೋಜನೆ ರೂಪಿಸಲಾಗಿದ್ದು, ಪಹಣಿ ಪತ್ರದಲ್ಲಿ ನಕ್ಷೆಯನ್ನು ಕೂಡ ನೀಡಲಾಗುತ್ತದೆ. ಪ್ರಾಯೋಗಿಕವಾಗಿ ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ನಂತರ ರಾಜ್ಯಾದ್ಯಂತ ವಿಸ್ತರಿಸಲಾಗುತ್ತದೆ.
ಹೊಸ ಪಹಣಿಯಲ್ಲಿಯೂ ಹಳೆ ಪಹಣಿಯಲ್ಲಿ ಇರುವಂತೆಯೇ ಎಲ್ಲ ವಿವರಗಳು ಇರುತ್ತವೆ. ಎಡಗಡೆ ಡಿಜಿಟಲ್ ಸ್ಕೆಚ್ ಇರಲಿದೆ. ವಿಸ್ತೀರ್ಣ, ಜಮೀನು ಎಲ್ಲಿದೆ?, ಒತ್ತುವರಿ ಮಾಹಿತಿ, ಕ್ಯೂಆರ್ ಕೋಡ್, ಬಾರ್ಕೋಡ್ ಮೊದಲಾದವುಗಳನ್ನು ಒಳಗೊಂಡಂತೆ ಹೊಸ ಪಹಣಿ ರೈತರ ಕೈಸೇರಲಿದೆ.
ಜಮೀನಿನ ನಕ್ಷೆಯನ್ನು ನೋಡಲು ರೈತರು ಭೂದಾಖಲೆಗಳ ಇಲಾಖೆ ಅಲೆದಾಡಬೇಕಿಲ್ಲ. ಪಹಣಿಯಲ್ಲಿಯೇ ಜಮೀನಿನ ನಕ್ಷೆ, ವಿವರಗಳನ್ನು ಒಳಗೊಂಡಂತೆ ಹೊಸ ಪಹಣಿ ನೀಡಲಾಗುತ್ತದೆ.
ಪಹಣಿಯಲ್ಲಿ ಪ್ರಸ್ತುತ ಜಮೀನಿನ ರೆಕಾರ್ಡ್ ಆಫ್ ರೈಟ್ಸ್, ಗೇಣಿ ಮತ್ತು ಪಹಣಿ ಪತ್ರಿಕೆ ಫಾರಂ ನಂಬರ್ 16 ರಲ್ಲಿ ಜಮೀನಿನ ವಿಸ್ತೀರ್ಣ, ಕಂದಾಯ, ಸ್ವಾಧೀನದಾರನ ಹೆಸರು, ತಂದೆಯ ಹೆಸರು ಮತ್ತು ವಿಳಾಸ, ಸ್ವಾಧೀನತೆಯ ರೀತಿ, ಇತರೆ ಹಕ್ಕುಗಳು, ಮಣ್ಣಿನ ನಮೂನೆ, ನೀರಾವರಿ ಮೂಲ ಸೇರಿದಂತೆ ಜಮೀನಿಗೆ ಸಂಬಂಧಿಸಿದ ಮಾಹಿತಿ ಇರುತ್ತದೆ. ಈಗ ಪಹಣಿ ಪತ್ರದಲ್ಲಿ ನಕ್ಷೆಯನ್ನು ಕೂಡ ನಮೂದಿಸಲಾಗುವುದು.ಇದರಿಂದ ವಂಚನೆಗೆ ಕಡಿವಾಣ ಹಾಕಬಹುದಾಗಿದೆ. ರೈತರಿಗೆ ಮತ್ತಷ್ಟು ಅನುಕೂಲವಾಗಲಿದೆ ಎಂದು ಹೇಳಲಾಗಿದೆ.