ಉಕ್ರೇನ್ ಮೇಲೆ ರಷ್ಯಾದ ಯುದ್ಧವು ಶುರುವಾಗಿ 10 ದಿನಗಳು ಕಳೆದಿವೆ. ನಾಗರಿಕರನ್ನು ಸ್ಥಳಾಂತರಿಸಲು ಎರಡು ಪ್ರದೇಶಗಳಲ್ಲಿ ತಾತ್ಕಾಲಿಕ ಕದನ ವಿರಾಮಕ್ಕೆ ಎರಡೂ ದೇಶಗಳು ಒಪ್ಪಿಕೊಂಡಿವೆ. ಸಾವಿರಾರು ಮಂದಿ ನಾಗರಿಕರು ತಮ್ಮ ದೇಶದ ಪರ ಹೋರಾಡಲು ಉಕ್ರೇನ್ ಸೈನ್ಯವನ್ನು ಸೇರಿದ್ದಾರೆ. ಯುವಕರು, ಯುವತಿಯರು, ಹಿರಿಯ ನಾಗರಿಕರು ಸೇರಿದಂತೆ ಹಲವಾರು ಜನರು ತಮ್ಮ ದೇಶದ ಪರ ಹೋರಾಡಲು ಟೊಂಕಕಟ್ಟಿ ನಿಂತಿದ್ದಾರೆ.
26 ವರ್ಷದ ಉಕ್ರೇನ್ ಪ್ರಜೆಯೊಬ್ಬರು ಈ ಬಗ್ಗೆ ಮಾತನಾಡಿದ್ದು, ತನ್ನ ದೇಶವನ್ನು ರಕ್ಷಿಸಲು ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಂಡಿರುವುದಾಗಿ ಹೆಮ್ಮೆಯಿಂದ ತಿಳಿಸಿದ್ದಾರೆ. ಫೆಬ್ರವರಿ 24 ರಂದು ರಷ್ಯಾ ಉಕ್ರೇನ್ ಅನ್ನು ಆಕ್ರಮಿಸುವ ಮೊದಲು ತಾನು ಮಾರ್ಕೆಟಿಂಗ್‌ನಲ್ಲಿ ಕೆಲಸ ಮಾಡುತ್ತಿದ್ದಾಗಿ ಅಲೆನಾ ಹೇಳಿದ್ದಾರೆ. ಯುದ್ಧ ಪ್ರಾರಂಭವಾದ ತಕ್ಷಣ ಆಕೆ ಉಕ್ರೇನಿಯನ್ ರಕ್ಷಣಾ ಪಡೆಗಳನ್ನು ಸೇರಿದ್ದಾಳೆ. ಇದೀಗ ಕೈವ್‌ನ ಹೊರವಲಯದಲ್ಲಿರುವ ಚೆಕ್‌ಪಾಯಿಂಟ್‌ನಲ್ಲಿ ಪ್ರಾದೇಶಿಕ ರಕ್ಷಣಾ ಘಟಕದಲ್ಲಿ ನಿಯೋಜಿಸಲ್ಪಟ್ಟಿದ್ದಾಳೆ.
ಎಲ್ಲಾ ಜನರು ತುಂಬಾ ಕರುಣಾಮಯಿಗಳಾಗಿದ್ದು, ಎಲ್ಲರೂ ಉಕ್ರೇನ್ ಅನ್ನು ಬೆಂಬಲಿಸುತ್ತಾರೆ. ಭೂಪ್ರದೇಶದ ರಕ್ಷಣೆ ಮತ್ತು ಸೈನ್ಯಕ್ಕೆ ಸಹಾಯ ಮಾಡಲು ಜನರು ಏನೂ ಮಾಡಲು ಕೂಡ ಸಿದ್ಧವಾಗಿದ್ದಾರೆ. ಏಕೆಂದರೆ ಅವರು ಉಕ್ರೇನ್ ನ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದಾರೆ. ಹೀಗಾಗಿ ಪ್ರತಿಯೊಬ್ಬರೂ ಕೊಡುಗೆ ನೀಡಲು ಬಯಸುತ್ತಾರೆ.
ಎಕೆ-47 (ಕಲಾಶ್ನಿಕೋವ್) ನೊಂದಿಗೆ ಶಸ್ತ್ರಸಜ್ಜಿತವಾದ ಅಲೆನಾ, ಆಯುಧವನ್ನು ಹೇಗೆ ನಿರ್ವಹಿಸಬೇಕೆಂದು ತನಗೆ ತಿಳಿದಿದೆ ಎಂದು ಹೇಳಿದ್ದಾರೆ. ಅಗತ್ಯವಿದ್ದರೆ ನಾವು ಖಂಡಿತವಾಗಿಯೂ ರಷ್ಯನ್ನರ ವಿರುದ್ಧ ಹೋರಾಡುತ್ತೇವೆ ಎಂದು ಉತ್ಸಾಹದಿಂದಲೇ ತಿಳಿಸಿದ್ದಾರೆ.