ಮದ್ಯಪಾನ ಮಾಡೋದು ನಿಮ್ಮ ಹೃದಯ ಹಾಗೂ ಕಿಡ್ನಿಗೆ ಒಳ್ಳೆಯದು ಅನ್ನೋ ವಿಚಿತ್ರ ಮೆಸೇಜ್ ಗಳನ್ನು ವಾಟ್ಸಾಪ್ ನಲ್ಲಿ ನೋಡಿರ್ತೀರಾ. ಆದ್ರೆ ಇದರಲ್ಲಿ ಎಳ್ಳಷ್ಟೂ ಸತ್ಯವಿಲ್ಲ. ಮದ್ಯಪಾನದಿಂದ ಮೆದುಳಿಗೂ ಹಾನಿಯಾಗುತ್ತದೆ ಎಂಬ ಆಘಾತಕಾರಿ ಅಂಶವೀಗ ಹೊಸದೊಂದು ಸಂಶೋಧನೆಯಲ್ಲಿ ಬಹಿರಂಗವಾಗಿದೆ.
36,000 ಜನರನ್ನು ಸಂಶೋಧನೆಗೆ ಒಳಪಡಿಸಿ ಈ ವರದಿಯನ್ನು ತಯಾರಿಸಲಾಗಿದೆ. ಪ್ರತಿದಿನ ಒಂದರಿಂದ ಎರಡು ಪೆಗ್ ಕುಡಿಯುವವರ ಮೆದುಳಿನಲ್ಲೂ ಬದಲಾವಣೆಗಳಾಗಿರೋದು ಸಾಬೀತಾಗಿದೆ. ಇನ್ನು ವಿಪರೀತ ಕುಡಿತದ ಚಟವಿರುವವರ ಮೆದುಳಿನ ರಚನೆ ಮತ್ತು ಗಾತ್ರದಲ್ಲಿ ಸಾಕಷ್ಟು ಬದಲಾವಣೆಗಳು ಕಂಡುಬಂದಿದ್ದು, ಅವು ದುರ್ಬಲವಾಗಿರುವುದು ಪತ್ತೆಯಾಗಿದೆ.
ಅಪರೂಪಕ್ಕೊಮ್ಮೆ ಅಂದ್ರೆ ವಾರಕ್ಕೊಮ್ಮೆ ಬಿಯರ್ ಅಥವಾ ವೈನ್ ಕುಡಿಯುವವರಿಗೂ ಅಪಾಯವಿದೆ ಅಂತಾ ಸಂಶೋಧಕರು ಎಚ್ಚರಿಸಿದ್ದಾರೆ. ಭಾರೀ ಕುಡಿತವು ಮೆದುಳಿನ ರಚನೆಯಲ್ಲಿ ಬದಲಾವಣೆಗಳನ್ನು ಉಂಟುಮಾಡುತ್ತದೆ ಎಂಬುದಕ್ಕೆ ಬಲವಾದ ಪುರಾವೆಗಳು ಸಿಕ್ಕಿವೆ. ಮೆದುಳಿನಾದ್ಯಂತ ಬೂದು ಮತ್ತು ಬಿಳಿ ದ್ರವ್ಯದಲ್ಲಿ ಡ್ಯಾಮೇಜ್ ಉಂಟಾಗಬಹುದು.
ಲಘುವಾದ ಕುಡಿತದಿಂದ ಮೆದುಳಿಗೆ ಪ್ರಯೋಜನಗಳಿವೆ ಅನ್ನೋದು ಸುಳ್ಳು ಎಂಬುದನ್ನು ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ. ಕುಡಿತದ ಜೊತೆಗೆ ನಿಮ್ಮ ವಯಸ್ಸು ಕೂಡ ಮೆದುಳಿನ ಗಾತ್ರದಲ್ಲಿ ಉಂಟಾಗುವ ಕಡಿತಕ್ಕೆ ಕಾರಣ. ನೀವು ಪ್ರತಿದಿನ ಸೇವಿಸುವ ಪ್ರತಿ ಹೆಚ್ಚುವರಿ ಆಲ್ಕೋಹಾಲ್ ಮೆದುಳಿನ ವಯಸ್ಸನ್ನೇ ಹೆಚ್ಚಿಸುತ್ತದೆ.