ಮೀರತ್: ಉತ್ತರ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸುಧಾರಿಸಿದೆ ಎಂದು ಹೇಳಿಕೊಂಡರೂ, ರಾಜ್ಯದಲ್ಲಿ ದಲಿತರ ಮೇಲೆ ಅದರಲ್ಲೂ ಮಹಿಳೆಯರ ಮೇಲಿನ ದೌರ್ಜನ್ಯಗಳಿಗೆ ಕೊನೆಯೇ ಇಲ್ಲದಂತಾಗಿದೆ.
ಸಹರಾನ್ ಪುರದಲ್ಲಿ ವರದಿಯಾಗಿರುವ ಆಘಾತಕಾರಿ ಘಟನೆಯೊಂದರಲ್ಲಿ ದಲಿತ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿ, ನಂತರ ಬಲವಂತವಾಗಿ ವಿಷ ಕುಡಿಸಿ ಹತ್ಯೆ ಮಾಡಲಾಗಿದೆ.
ಆರೋಪಿಯನ್ನು 16 ವರ್ಷದ ಸಂತ್ರಸ್ತೆಯ ಶಾಲೆಯ ಹಿರಿಯ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಘಟನೆ ಗುರುವಾರ ನಡೆದಿದೆ. ಆರೋಪಿಯನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಬಾಲಕಿ ಗುರುವಾರ ಶಾಲೆಯಿಂದ ನಾಪತ್ತೆಯಾಗಿದ್ದು, ಗ್ರಾಮದ ಹೊರವಲಯದ ಹೊಲವೊಂದರಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಬಾಲಕಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೇ ಅವಳು ಸಾವನ್ನಪ್ಪಿದಳು.
“ಆರೋಪಿ ವಿದ್ಯಾರ್ಥಿಯ ಮೇಲೆ ಅತ್ಯಾಚಾರ, ಕೊಲೆ ಮತ್ತು ಭಾರತೀಯ ದಂಡ ಸಂಹಿತೆಯ(ಐಪಿಸಿ) ಇತರ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ಶುಕ್ರವಾರ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಸಹರಾನ್‌ಪುರ ಎಸ್.ಪಿ.(ನಗರ) ರಾಜೇಶ್ ಕುಮಾರ್ ಹೇಳಿದ್ದಾರೆ.
ಪೊಲೀಸರ ಪ್ರಕಾರ, ಆರೋಪಿ ಉಡುಗೊರೆ ಖರೀದಿಸುವ ನೆಪದಲ್ಲಿ ವಿದ್ಯಾರ್ಥಿನಿಯನ್ನು ಶಾಲೆಯಿಂದ ಹೊರಗೆ ಕರೆದುಕೊಂಡು ಹೋಗಿದ್ದಾನೆ. ಗುರುವಾರ ಬೆಳಗ್ಗೆ ಶಾಲೆಯ ಪರೀಕ್ಷೆಗೆಂದು ಬಾಲಕಿ ಮನೆಯಿಂದ ಹೊರಟಿದ್ದಳು ಎಂದು ಸಂತ್ರಸ್ತೆಯ ಸಹೋದರ ಪೊಲೀಸ್ ಸಹಾಯವಾಣಿಗೆ ತಿಳಿಸಿದ್ದಾರೆ.
ಬಾಲಕಿಯ ಬ್ಯಾಗ್ ಶಾಲೆಯ ಕೊಠಡಿಯ ಮೇಜಿನ ಮೇಲೆ ಇರುವುದನ್ನು ಶಿಕ್ಷಕಿ ನೋಡಿ ಪೋಷಕರನ್ನು ಸಂಪರ್ಕಿಸಿದಳು. ಹುಡುಗಿ ಮನೆಗೂ ಹೋಗದೇ ತರಗತಿಯಿಂದ ಕಾಣೆಯಾಗಿದ್ದಾಳೆ ಎಂದು ಗೊತ್ತಾಗಿ ಕುಟುಂಬದವರು ಆತಂಕಕ್ಕೊಳಗಾದರು. ಅವಳಿಗಾಗಿ ಹುಡುಕಾಟ ಪ್ರಾರಂಭಿಸಿದ್ದಾರೆ. ನಂತರದಲ್ಲಿ ಬಾಲಕಿ ಹೊಲವೊಂದರಲ್ಲಿ ಅರೆಬೆತ್ತಲೆ ಸ್ಥಿತಿಯಲ್ಲಿ ಕಂಡು ಬಂದಿದ್ದಾಳೆ.
ಹುಡುಗಿಯ ಸಂಬಂಧಿಕರು ಅವಳಿಗೆ ಏನಾಯಿತು ಎಂದು ಕೇಳಿದಾಗ, ಆಕೆಯ ಶಾಲೆಯ ಹಿರಿಯರೊಬ್ಬರು ಅವಳನ್ನು ಹೋಟೆಲ್ ಕೋಣೆಗೆ ಕರೆದೊಯ್ದು ಅತ್ಯಾಚಾರ ಮಾಡಿದರು. ನಂತರ ವಿಷ ಸೇವಿಸುವಂತೆ ಒತ್ತಾಯಿಸಿದ್ದರು ಎಂದು ಸಂತ್ರಸ್ತೆ ಹೇಳಿದ್ದಾಳೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.