ಗೋರಖ್ಪುರ: ಉತ್ತರಪ್ರದೇಶದಲ್ಲಿ ವಿಧಾನಸಭಾ ಚುನಾವಣೆಗೆ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಈ ನಡುವೆ ವೃದ್ಧೆಯೊಬ್ಬರನ್ನು ಪೊಲೀಸ್ ಪೇದೆ ತನ್ನ ತೋಳಿನಲ್ಲಿ ಎತ್ತಿಕೊಂಡು ಹೋಗಿರುವ ವಿಡಿಯೋ ವೈರಲ್ ಆಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಪೊಲೀಸ್ ಪೇದೆಯೊಬ್ಬರು ವೃದ್ಧೆಯೊಬ್ಬರನ್ನು ಮತಗಟ್ಟೆಗೆ ಕರೆದೊಯ್ದಿದ್ದಾರೆ. ಉತ್ತರ ಪ್ರದೇಶದ ಗೋರಖ್ಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಯುಪಿ ಪೊಲೀಸರ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಪೊಲೀಸ್ ಪೇದೆಯನ್ನು ಪವನ್ ಕುಮಾರ್ ಎಂದು ಗುರುತಿಸಲಾಗಿದೆ.
ವಿಡಿಯೋದಲ್ಲಿ, ವೃದ್ಧ ಮಹಿಳೆ ಮತ ಚಲಾವಣೆ ಮಾಡಿದ ಬಳಿಕ ಮತದಾನ ಕೇಂದ್ರದಿಂದ ಹೊರಬರಲು ಆಕೆಗೆ ಪೊಲೀಸ್ ಪೇದೆ ಪವನ್ ಕುಮಾರ್ ಸಹಾಯ ಮಾಡಿರುವುದನ್ನು ತೋರಿಸುತ್ತದೆ.
ಭುಜದ ಮೇಲೆ ಬಂದೂಕು ಮತ್ತು ಮಡಿಲಲ್ಲಿ ತಾಯಿ. ಅದಕ್ಕಾಗಿಯೇ ನಾವು ಖಾಕಿ ಸಮವಸ್ತ್ರದ ಬಗ್ಗೆ ಹೆಮ್ಮೆಪಡುತ್ತೇವೆ. ಗೋರಖ್ಪುರ ಜಿಲ್ಲೆಯಲ್ಲಿ ಕಾನ್ಸ್ಟೇಬಲ್ ಪವನ್ಕುಮಾರ್ ಅವರು ಬಾದಲ್ಗಂಜ್ ಪೊಲೀಸ್ ಠಾಣೆಯ ಮತದಾನ ಸ್ಥಳದಲ್ಲಿ ವೃದ್ಧ ಮಹಿಳೆಯೊಬ್ಬರಿಗೆ ಸಹಾಯ ಮಾಡಿದ್ದಾರೆ. ನಿಮ್ಮ ಬಗ್ಗೆ ಹೆಮ್ಮೆಯಿದೆ ಎಂದು ಪೋಸ್ಟ್ ಗೆ ಶೀರ್ಷಿಕೆ ನೀಡಲಾಗಿದೆ. ಪೊಲೀಸ್ ಪೇದೆಯ ಸಹಾಯಕ್ಕೆ ನೆಟ್ಟಿಗರು ಕೂಡ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.