ಮೊಹಾಲಿ: ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಮೊಹಾಲಿಯಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ದಾಖಲೆ ಬರೆದಿದ್ದಾರೆ.
ಅಂದ ಹಾಗೆ, ಇದು ವಿರಾಟ್ ಕೊಹ್ಲಿ ಅವರಿಗೆ 100ನೇ ಟೆಸ್ಟ್ ಪಂದ್ಯವಾಗಿದೆ. ಸಚಿನ್ ತೆಂಡೂಲ್ಕರ್ 200 ಪಂದ್ಯ, ರಾಹುಲ್ ದ್ರಾವಿಡ್ 164, ವಿವಿಎಸ್ ಲಕ್ಷ್ಮಣ್ 134, ಅನಿಲ್ ಕುಂಬ್ಳೆ 132, ಕಪಿಲ್ ದೇವ್ 131, ಸುನಿಲ್ ಗವಾಸ್ಕರ್ 125, ವೆಂಗ್ ಸರ್ಕಾರ್ 116, ಸೌರವ್ ಗಂಗೂಲಿ 113, ಇಶಾಂತ್ ಶರ್ಮ 105, ವೀರೇಂದ್ರ ಸೆಹವಾಗ್ 104, ಹರ್ಭಜನ್ ಸಿಂಗ್ 103 ಪಂದ್ಯಗಳನ್ನಾಡಿದ್ದು, ಕೊಹ್ಲಿ ಅವರಿಗಿಂತ ಮುಂದಿದ್ದಾರೆ
ಇನ್ನು ವಿರಾಟ್ ಕೊಹ್ಲಿ ಇಂದಿನ ಪಂದ್ಯದಲ್ಲಿ 8000 ರನ್ ಪೂರ್ಣಗೊಳಿಸಿದ ಬ್ಯಾಟರ್ ಗಳ ಸಾಲಿಗೆ ಸೇರ್ಪಡೆಯಾಗಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ 8000 ರನ್ ಗಳಿಸಿದ ಭಾರತದ 6 ನೇ ಮತ್ತು ವಿಶ್ವದ 33ನೇ ಬ್ಯಾಟರ್ ಆಗಿದ್ದಾರೆ.
100 ಟೆಸ್ಟ್ ಪಂದ್ಯಗಳಲ್ಲಿ 169 ಇನ್ನಿಂಗ್ಸ್ ಆಡಿದ್ದು, 8007 ರನ್ ಗಳಿಸಿದ್ದಾರೆ. 254 ಅತಿ ಹೆಚ್ಚು ಸ್ಕೋರ್ ಆಗಿದೆ. 27 ಶತಕ, 7 ದ್ವಿಶತಕ, 28 ಅರ್ಧಶತಕ ಸಿಡಿಸಿದ್ದಾರೆ.
ಸಚಿನ್ ತೆಂಡೂಲ್ಕರ್ 15,921 ರನ್, ರಾಹುಲ್ ದ್ರಾವಿಡ್ 13,288 ರನ್, ಸುನಿಲ್ ಗವಾಸ್ಕರ್ 10,122, ವಿವಿಎಸ್ ಲಕ್ಷ್ಮಣ್ 8781, ವೀರೇಂದ್ರ ಸೇವಾಗ್ 8586 ರನ್ ಗಳಿಸಿ ಭಾರತದ ಪರವಾಗಿ 8000 ರನ್ ಪೂರೈಸಿದ ಆಟಗಾರರಾಗಿದ್ದಾರೆ.
2012 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಡಿಲೇಡ್ ನಲ್ಲಿ 119 ರನ್ ಬಾರಿಸಿದ್ದ ಕೊಹ್ಲಿ ಚೊಚ್ಚಲ ಟೆಸ್ಟ್ ಶತಕ ಸಿಡಿಸಿದ್ದರು. 2016 ರಲ್ಲಿ ವೆಸ್ಟ್ ಇಂಡೀಸ್ ಪ್ರವಾಸದ ವೇಳೆ ಆಂಟಿಗುವಾದಲ್ಲಿ ಕೊಹ್ಲಿ 200 ರನ್ ಬಾರಿಸಿದ್ದು, ಅದು ಅವರ ವೃತ್ತಿ ಜೀವನದ ಮೊದಲ ದ್ವಿಶತಕ ಆಗಿದ್ದು, ವಿದೇಶಿ ನೆಲದಲ್ಲಿ ದ್ವಿಶತಕ ಸಿಡಿಸಿದ ಭಾರತದ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು.
ಆಸ್ಟ್ರೇಲಿಯಾದಲ್ಲಿ ಮೊದಲ ಜಯ ಕೊಡಿಸಿದ ನಾಯಕ ವಿರಾಟ್ ಕೊಹ್ಲಿ ಅವರ ನಾಯಕತ್ವದಲ್ಲಿ ಭಾರತ ತಂಡ ಟೆಸ್ಟ್ ಮಾದರಿಯಲ್ಲಿ ನಂಬರ್ ಒನ್ ಸ್ಥಾನ ಅಲಂಕರಿಸಿತ್ತು.
2014 ರಲ್ಲಿ ನಾಯಕ ಎಂಎಸ್ ಧೋನಿ ಗಾಯಗೊಂಡಿದ್ದರಿಂದ ಆಡಿಲೆಡ್ ಟೆಸ್ಟ್ ಪಂದ್ಯದ ಹಂಗಾಮಿ ನಾಯಕನಾಗಿದ್ದ ವಿರಾಟ್ ಕೊಹ್ಲಿ ಎರಡು ಇನಿಂಗ್ಸ್ ಗಳಲ್ಲಿ ಶತಕ ಬಾರಿಸಿದ್ದರು.