ಮಾಸ್ಕೋ: ರಷ್ಯಾದ ಟಿವಿ ಚಾನೆಲ್‌ನ ಸಂಪೂರ್ಣ ಸಿಬ್ಬಂದಿ ಉಕ್ರೇನ್ ವಿರುದ್ಧ ‘ಯುದ್ಧ ಬೇಡ’ ಎಂದು ನೇರ ಪ್ರಸಾರದಲ್ಲೇ ರಾಜೀನಾಮೆ ನೀಡಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ಆಕ್ರಮಣದ ಬಗ್ಗೆ ಪ್ರಸಾರ ಮಾಡಿದ್ದಕ್ಕೆ ವಾಹಿನಿಯ ಪ್ರಸಾರ ನಿಲ್ಲಿಸಬೇಕೆಂದು ಅಧಿಕಾರಿಗಳಿಂದ ಆದೇಶಿಸಿದ ನಂತರ ಲಿಬರಲ್ ರಷ್ಯಾದ ದೂರದರ್ಶನ ಚಾನೆಲ್ ಟಿವಿ ರೈನ್(ಡೋಜ್) ತನ್ನ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ತನ್ನ ಕೊನೆಯ ಪ್ರಸಾರದಲ್ಲಿ ‘ಯುದ್ಧ ಬೇಡ’ ಎಂದು ಘೋಷಿಸಿದ ನಂತರ ಸುದ್ದಿ ವಾಹಿನಿಯ ಸಂಪೂರ್ಣ ಸಿಬ್ಬಂದಿ ನೇರ ಪ್ರಸಾರದಲ್ಲಿ ರಾಜೀನಾಮೆ ನೀಡಿದ್ದಾರೆ.
ಉದ್ಯೋಗಿಗಳ ನಾಟಕೀಯ ನಿರ್ಗಮನದ ನಂತರ, ಚಾನೆಲ್ ‘ಸ್ವಾನ್ ಲೇಕ್’ ಬ್ಯಾಲೆಟ್ ವೀಡಿಯೊವನ್ನು ಪ್ಲೇ ಮಾಡುವ ಮೂಲಕ ಪ್ರಸಾರವನ್ನು ನಿಲ್ಲಿಸಿದೆ.
1991 ರಲ್ಲಿ ಸೋವಿಯತ್ ಯೂನಿಯನ್ ಪತನಗೊಂಡಾಗ ರಷ್ಯಾದಲ್ಲಿ ಸರ್ಕಾರಿ ಟಿವಿ ಚಾನೆಲ್ ಗಳಲ್ಲಿ ಅದೇ ವಿಡಿಯೋವನ್ನು ತೋರಿಸಲಾಗಿತ್ತು.
ಉಸಿರಾಡಲು ಮತ್ತು ಮುಂದೆ ಹೇಗೆ ಕೆಲಸ ಮಾಡಬೇಕೆಂದು ಅರ್ಥಮಾಡಿಕೊಳ್ಳಲು ನಮಗೆ ಶಕ್ತಿ ಬೇಕು. ಮುಂದೆ ನಮ್ಮ ಕೆಲಸವನ್ನು ಮುಂದುವರಿಸುತ್ತೇವೆ ಎಂದು ಭಾವಿಸುತ್ತೇವೆ ಎಂದು ಟಿವಿ ರೇನ್(ಡೊಜ್) ನ ಸಿಇಒ ನಟಾಲಿಯಾ ಸಿಂಡೆಯೆವಾ ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದಾರೆ.
ಇದಕ್ಕೂ ಮೊದಲು, ಉಕ್ರೇನ್ ನಲ್ಲಿನ ಯುದ್ಧದ ಬಗ್ಗೆ ಪ್ರಸಾರ ಮಾಡಿದ ಕಾರಣಕ್ಕೆ ಸರ್ಕಾರದ ಒತ್ತಡದಿಂದಾಗಿ ರಷ್ಯಾದ ಮೀಡಿಯಾ ಔಟ್ಲೆಟ್, ಎಖೋ ಮಾಸ್ಕ್ವಿ ರೇಡಿಯೋ ಸ್ಟೇಷನ್ ಸ್ಥಗಿತಕ್ಕೆ ಸೂಚಿಸಲಾಗಿತ್ತು.
ರಷ್ಯಾದ ಪ್ರಮುಖ ಸುದ್ದಿ ಮತ್ತು ಪ್ರಸ್ತುತ ವ್ಯವಹಾರಗಳ ಚಾನೆಲ್ ಗಳಲ್ಲಿ ಒಂದಾಗಿರುವ ರೇಡಿಯೊ ಸ್ಟೇಷನ್ ನ ಮಂಡಳಿಯು ಚಾನೆಲ್ ವಿಸರ್ಜಿಸಿದೆ. ರೇಡಿಯೋ ಚಾನೆಲ್ ಮತ್ತು ಎಖೋ ಮಾಸ್ಕ್ವಿಯ ವೆಬ್ ಸೈಟ್ ದಿವಾಳಿ ಮಾಡಲು ಎಖೋ ಮಾಸ್ಕ್ವಿ ನಿರ್ದೇಶಕರ ಮಂಡಳಿಯು ನಿರ್ಧರಿಸಿದೆ ಎಂದು ಎಖೋ ಮಾಸ್ಕ್ವಿ ರೇಡಿಯೊ ಸ್ಟೇಷನ್‌ನ ಪ್ರಧಾನ ಸಂಪಾದಕ ಅಲೆಕ್ಸಿ ವೆನೆಡಿಕ್ಟೋವ್ ತಿಳಿಸಿದ್ದಾರೆ.
ಈ ವಾರದ ಆರಂಭದಲ್ಲಿ ವೆನೆಡಿಕ್ಟೋವ್ ರಾಯಿಟರ್ಸ್ ಸುದ್ದಿ ಸಂಸ್ಥೆಗೆ, ಮೂರು ದಶಕಗಳಿಂದ ತನ್ನ ವಿಶಿಷ್ಟ ಲಕ್ಷಣವಾಗಿರುವ ಸ್ವತಂತ್ರ ಸಂಪಾದಕೀಯ ಮಾರ್ಗವನ್ನು ನಿಲ್ದಾಣವು ತ್ಯಜಿಸುವುದಿಲ್ಲ ಎಂದು ಘೋಷಿಸಿದ್ದು, ನಮ್ಮ ಸಂಪಾದಕೀಯ ನೀತಿಗಳು ಬದಲಾಗುವುದಿಲ್ಲ ಎಂದು ಹೇಳಿದರು.
ನಾನು ಪ್ರಧಾನ ಸಂಪಾದಕನಾಗಿರುವವರೆಗೂ ಸಂಪಾದಕೀಯ ನೀತಿಯು ಬದಲಾಗದೆ ಉಳಿಯುತ್ತದೆ ಎಂದು ತಮ್ಮ ನಿಲುವನ್ನು ಪುನರುಚ್ಚರಿಸಿದರು.
ಭಿನ್ನಾಭಿಪ್ರಾಯದ ಧ್ವನಿಗಳನ್ನು ಮುಚ್ಚಿಹಾಕಲು ಮತ್ತು ಉಕ್ರೇನ್ ವಿರುದ್ಧ ಕ್ರಮದ ಆಂತರಿಕ ಟೀಕೆಗಳನ್ನು ನಿಲ್ಲಿಸುವ ಕ್ರಮದಲ್ಲಿ, ರಷ್ಯಾದ ಪ್ರಾಸಿಕ್ಯೂಟರ್ ಜನರಲ್ ಈ ವಾರದ ಆರಂಭದಲ್ಲಿ ಟಿವಿ ರೇನ್ ಮತ್ತು ಎಖೋ ಮಾಸ್ಕ್ವಿಗೆ ನಿರ್ಬಂಧ ವಿಧಿಸಲು ಮೀಡಿಯಾ ವಾಚ್‌ಡಾಗ್ ಗೆ ಆದೇಶಿಸಿದರು. ಈ ನಿಷೇಧ ಉದ್ದೇಶಪೂರ್ವಕವಾಗಿದೆ ಎಂದು ಹೇಳಲಾಗಿದೆ. ಆದರೆ, ಹೀಗೆ ಪ್ರಚುರ ಮಾಡುವ ಮೂಲಕ ಉಗ್ರಗಾಮಿ ಮತ್ತು ಹಿಂಸಾತ್ಮಕ ಕೃತ್ಯಗಳಿಗೆ ಕರೆ ನೀಡಿದಂತಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ,
ಉಕ್ರೇನ್ ನಲ್ಲಿ ರಷ್ಯಾದ ಮಿಲಿಟರಿ ಸಿಬ್ಬಂದಿ ಕ್ರಮಗಳ ಬಗ್ಗೆ ಉದ್ದೇಶಪೂರ್ವಕವಾಗಿ ಸುಳ್ಳು ಮಾಹಿತಿಯನ್ನು ಪ್ರಚಾರ ಮಾಡಿದ್ದಕ್ಕಾಗಿ ಮಾಧ್ಯಮಗಳಿಗೆ ದಂಡ ವಿಧಿಸಲಾಗಿದೆ ಎಂದು ರಷ್ಯಾದ ಅಧಿಕಾರಿಗಳು ಹೇಳಿದ್ದಾರೆ. ರಷ್ಯಾದಲ್ಲಿ ಸ್ವತಂತ್ರ ಮಾಧ್ಯಮದ ವಿರುದ್ಧದ ಈ ಕ್ರಮಗಳು ದೇಶದ ಶೀಘ್ರವಾಗಿ ಕ್ಷೀಣಿಸುತ್ತಿರುವ ಪತ್ರಿಕಾ ಸ್ವಾತಂತ್ರ್ಯಕ್ಕೆ ಇತ್ತೀಚಿನ ಹೊಡೆತವಾಗಿದೆ. ಸ್ವತಂತ್ರ ಮಾಧ್ಯಮವನ್ನು ಹತ್ತಿಕ್ಕುತ್ತಿದೆ ಎಂದು ಹೇಳಲಾಗಿದೆ.