ಮುಂಬೈನ ನೂತನ ಪೊಲೀಸ್ ಕಮಿಷನರ್ ಆಗಿ ಅಧಿಕಾರ ವಹಿಸಿಕೊಂಡಿರುವ ಸಂಜಯ್ ಪಾಂಡೆ ಅವರ ಆಗಮನದಿಂದ ಸಾಕಷ್ಟು ಬದಲಾವಣೆಯಾಗುವ ಸಾಧ್ಯತೆ ಕಾಣುತ್ತಿದೆ. ಪಾಂಡೆ ಅವರು, ಮಹಾರಾಷ್ಟ್ರದ ಡಿಜಿಪಿಯಾಗಿದ್ದಾಗ ಮಹಿಳಾ ಅಧಿಕಾರಿಗಳಿಗೆ ಎಂಟು ಗಂಟೆಗಳ ಪಾಳಿಯನ್ನು ಮರುಪ್ರಾರಂಭಿಸುವ ಬಗ್ಗೆ ಘೋಷಿಸಿದ್ದರು. ಈಗ ಇದಕ್ಕೆ ಮರುಜೀವ ಬರುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.
ಮಾರ್ಚ್ 8 ರಿಂದ ಮುಂಬೈ ನಗರದಲ್ಲಿ ಮಹಿಳಾ ಅಧಿಕಾರಿಗಳಿಗೆ 8 ಗಂಟೆಗಳ ಪಾಳಿ ಪುನರಾರಂಭವಾಗಬಹುದು ಎಂದು ಇಲಾಖೆಯ ಉನ್ನತ ಮೂಲಗಳು ಖಚಿತಪಡಿಸಿವೆ. ಹಿಂದಿನ ಉನ್ನತ ಪೊಲೀಸ್ ಅಧಿಕಾರಿಗಳು ಕಡಿಮೆ ಕೆಲಸದ ಸಮಯವನ್ನು ಪುನರಾರಂಭಿಸಲು ಹೆಚ್ಚು ಉತ್ಸುಕರಾಗಿರಲಿಲ್ಲ. ಹನ್ನೆರಡು ಗಂಟೆಯ ಪಾಳಿಯನ್ನು ಎಂಟು ಗಂಟೆಗೆ ಇಳಿಸುವುದು ಕಷ್ಟ ಸಾಧ್ಯ ಎಂದು ಕೆಲವು ಅಧಿಕಾರಿಗಳು ತಿಳಿಸಿದ್ದರು ಎಂದು ಮಿಡ್ ಡೇ ವರದಿ ಮಾಡಿದೆ.
ಆದರೆ ಈಗ ಈ ಪಾಳಿಯ ವಿಚಾರ ಮತ್ತೆ ಮುನ್ನೆಲೆಗೆ ಬಂದಿದ್ದು, ಕಮಿಷನರ್ ಕಚೇರಿಯಲ್ಲಿರುವ ಮೂಲಗಳ ಪ್ರಕಾರ 8 ಗಂಟೆಗಳ ಕರ್ತವ್ಯವನ್ನು ಮರುಪ್ರಾರಂಭಿಸುವ ಪ್ರಕ್ರಿಯೆಯನ್ನು ಈಗಾಗಲೇ ಪ್ರಾರಂಭಿಸಲಾಗಿದೆ. ಶುಕ್ರವಾರದೊಳಗೆ ಈ ಪ್ರಸ್ತಾವನೆಯನ್ನು ಅಂತಿಮಗೊಳಿಸಬಹುದು ಎನ್ನಲಾಗಿದೆ.
ಅಂತರರಾಷ್ಟ್ರೀಯ ಮಹಿಳಾ ದಿನದ ಸಂದರ್ಭದ ಅಂದರೆ, ಮಾರ್ಚ್ 8 ರಂದು ಡ್ಯೂಟಿ ಶಿಫ್ಟ್ ಅನ್ನು ಮರು-ಪ್ರಾರಂಭಿಸಲು ಕಮಿಷನರ್ ಸಿದ್ಧತೆ ನಡೆಸಿಕೊಂಡಿದ್ದಾರೆ. ಹೆಸರೇಳಲಿಚ್ಛಿಸದ ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ಈ ಮಾಹಿತಿ ನೀಡಿದ್ದು, ಇದರಿಂದ ಮುಂಬೈನ ಸುಮಾರು 8,000 ಮಹಿಳಾ ಅಧಿಕಾರಿಗಳಿಗೆ ಪ್ರಯೋಜನವಾಗಲಿದೆ ಎಂದಿದ್ದಾರೆ.