ನವದೆಹಲಿ: ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ (ಬಿಜಿಎಂಐ) ಅನ್ನು ನಿಷೇಧಿಸುವಂತೆ ಕೋರಿ ತೆಲಂಗಾಣ ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಸಲಾಗಿದೆ. ಇದಕ್ಕೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ, ಪಬ್ಬಿ ಮೊಬೈಲ್ ಅಪ್ಲಿಕೇಶನ್ ಮತ್ತು ಬಿಜಿಎಮ್ಐ ಅಪ್ಲಿಕೇಶನ್ ಒಂದೇ ಅಲ್ಲ ಎಂದು ತಿಳಿಸಿದೆ.
ಬ್ಯಾಟಲ್ ಗ್ರೌಂಡ್ಸ್ ಮೊಬೈಲ್ ಇಂಡಿಯಾ (ಬಿಜಿಎಮ್ಐ) ಅನ್ನು ನಿಷೇಧಿಸುವ ಸಂಬಂಧ ಯಾವುದೇ ಮನವಿಗಳನ್ನು ಸರ್ಕಾರ ಸ್ವೀಕರಿಸಿಲ್ಲ ಎಂದು ಸಚಿವಾಲಯವು ಹೈಕೋರ್ಟ್‌ಗೆ ತಿಳಿಸಿದೆ. ಲಾಭೋದ್ದೇಶವಿಲ್ಲದ ಸಂಸ್ಥೆಯೊಂದು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಕೈಗೆತ್ತಿಕೊಂಡಿತ್ತು.
ಈ ವಿಷಯಕ್ಕೆ ಪ್ರತಿಕ್ರಿಯಿಸಿದ್ದ ಆರ್‌ಎಸ್‌ಎಸ್-ಅಂಗಸಂಸ್ಥೆ ಸ್ವದೇಶಿ ಜಾಗರಣ್ ಮಂಚ್, ಸರ್ಕಾರವು ಬಿಜಿಎಮ್ಐ-ಪಬ್ಜಿ ಅಪ್ಲಿಕೇಶನ್‌ನ ಪೂರ್ವವರ್ತಿಗಳು ಮತ್ತು ಚೀನಾ ಪ್ರಭಾವವನ್ನು ಕೂಲಂಕುಷವಾಗಿ ತನಿಖೆ ಮಾಡಬೇಕು. ಉಲ್ಲಂಘನೆ ಕಂಡುಬಂದಲ್ಲಿ ಕ್ರಮ ಕೈಗೊಳ್ಳಬೇಕು ಎಂದು ವಿನಂತಿಸಿದೆ.
ಲಾಭೋದ್ದೇಶವಿಲ್ಲದ ಸಂಸ್ಥೆ ಪ್ರಹಾರ್, ಮಲ್ಟಿಪ್ಲೇಯರ್ ಆನ್‌ಲೈನ್ ವಿಡಿಯೋ ಗೇಮ್ ಬಿಜಿಎಂಐ-ಪಬ್ಜಿ ಅನ್ನು ನಿರ್ಬಂಧಿಸುವಂತೆ ಸರ್ಕಾರವನ್ನು ಒತ್ತಾಯಿಸಿದೆ. ಇದು ನಿಷೇಧಿತ ಚೈನೀಸ್ ಗೇಮಿಂಗ್ ಅಪ್ಲಿಕೇಶನ್ ಪಬ್ಜಿಯ ಹೊಸ ಅವತಾರವಾಗಿದೆ ಮತ್ತು ಇದು ಭಾರತದ ಭದ್ರತೆ, ಸಾರ್ವಭೌಮತೆ ಮತ್ತು ಸಮಗ್ರತೆಗೆ ಗಂಭೀರ ಅಪಾಯವನ್ನುಂಟು ಮಾಡುತ್ತದೆ ಎಂದು ಸಂಸ್ಥೆ ಆರೋಪಿಸಿದೆ.
ನಿಷೇಧವಾದ ಒಂದು ವರ್ಷದೊಳಗೆ, ಪಬ್ಜಿಯನ್ನು ಟೆನ್ಸೆಂಟ್ ಕ್ರಾಫ್ಟನ್ ನ ಮುಂಭಾಗದ ಕಂಪನಿಯು ಬಿಜಿಎಂಐ ಎಂಬ ಹೊಸ ಹೆಸರಿನಲ್ಲಿ ಭಾರತದಲ್ಲಿ ಮರು-ಪರಿಚಯಿಸಲಾಗಿದೆ ಎಂದು ಅದು ದೂರಿದೆ.