ಕೈವ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಿಂದ ಉಕ್ರೇನ್ನಿಂದ ಭಾರತಕ್ಕೆ ಮೊದಲ ವಿಮಾನ ಹೊರಟ ಬಗ್ಗೆ ಮಾಹಿತಿ ಹೊರಬಿದ್ದ ಬಳಿಕ ಇಲ್ಲಿಯವರೆಗೆ 18 ಸಾವಿರ ಮಂದಿ ಭಾರತೀಯ ಪ್ರಜೆಗಳು ಉಕ್ರೇನ್ ತೊರೆದಿದ್ದಾರೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅಧಿಕೃತ ಮಾಹಿತಿ ನೀಡಿದೆ.
ಮೂರು ಐಎಎಫ್ ಸಿ-17 ಮತ್ತು ಏರ್ ಇಂಡಿಯಾ, ಇಂಡಿಗೋ, ಸ್ಪೈಸ್ ಜೆಟ್, ಗೋ ಫಸ್ಟ್ ಮತ್ತು ಗೋ ಏರ್ನಂತಹ ಇತರ ವಾಣಿಜ್ಯ ವಿಮಾನಗಳು ಸೇರಿದಂತೆ 18 ವಿಮಾನಗಳನ್ನು ಮುಂದಿನ 24 ಗಂಟೆಗಳ ಕಾಲ ನಿಗದಿಪಡಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯದ ಅಧಿಕೃತ ವಕ್ತಾರ ಅರಿಂದ್ ಬಾಗ್ಜಿ ಮಾಹಿತಿ ನೀಡಿದ್ದಾರೆ. ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯರನ್ನು ತಾಯ್ನಾಡಿಗೆ ಮರಳಿ ತರಲು ಕೇಂದ್ರ ಸರ್ಕಾರವು ನಡೆಸುತ್ತಿರುವ ಆಪರೇಷನ್ ಗಂಗಾ ಕಾರ್ಯಾಚರಣೆಯ ಬಗ್ಗೆ ಮಾತನಾಡುತ್ತಾ ಅವರು ಈ ಮಾಹಿತಿಯನ್ನು ನೀಡಿದರು.
ಇಲ್ಲಿಯವರೆಗೆ ಒಟ್ಟು 30 ವಿಮಾನಗಳು ಆಪರೇಷನ್ ಗಂಗಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿವೆ. ಇಲ್ಲಿವರೆಗೆ 6400 ಭಾರತೀಯರು ಸುರಕ್ಷಿತವಾಗಿ ಭಾರತಕ್ಕೆ ಬಂದಿಳಿದಿದ್ದಾರೆ ಎಂದು ಅರಿಂದ್ ಹೇಳಿದರು.