ಬೆಂಗಳೂರು: ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ನಡೆಸುತ್ತಿರುವ ಪಾದಾಯಾತ್ರೆ ಇಂದು ಕೊನೆಗೊಳ್ಳಲಿದ್ದು, ಇಂದು ನಮ್ಮ ಹೋರಾಟ ಕೇವಲ ಸಾಂಕೇತಿಕವಾಗಿ ಮಾತ್ರ ಅಂತ್ಯವಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಬಿಜೆಪಿ ನಾಯಕರಿಗೆ ಕಾಂಗ್ರೆಸ್ ಪಾದಯಾತ್ರೆ ಕಂಡು ಹೊಟ್ಟೆ ಕಿಚ್ಚು. ಅಸೂಯೆ, ಹೊಟ್ಟೆಕಿಚ್ಚಿಗೆ ಮದ್ದಿಲ್ಲ. ಯಾರು ಎಷ್ಟೇ ನಮ್ಮ ಹೋರಾಟ ತಡೆಯಲು ಯತ್ನಿಸಿದರೂ ಮುಂದಿಟ್ಟ ಹೆಜ್ಜೆಯನ್ನು ನಾವು ಹಿಂದೆ ಇಡಲ್ಲ. ಮೇಕೆದಾಟು ಯೋಜನೆ ಜಾರಿಯಾಗುವವರೆಗೂ ನಮ್ಮ ಹೋರಾಟ ಮುಂದುವರೆಯುತ್ತೆ ಎಂದರು.
ಇಂದು ಪಾದಯಾತ್ರೆ ಸಾಂಕೇತಿಕವಾಗಿ ಕೊನೆಗೊಳ್ಳಲಿದೆ ಅಷ್ಟೆ. ನಾವು ಜನರ ಹಿತಕ್ಕಾಗಿ, ಕುಡಿಯುವ ನೀರಿಗಾಗಿ ಪಾದಯಾತ್ರೆ ಮಾಡುತ್ತಿದ್ದೇವೆ. ಕಾಂಗ್ರೆಸ್ ವಿರುದ್ಧ ಆರೋಪಗಳನ್ನು ಮಾಡುವುದನ್ನು ಬಿಟ್ಟು ರಾಜ್ಯ ಸರ್ಕಾರ ಯೋಜನೆ ಜಾರಿಗೆ ಮುಂದಾಗಲಿ ಎಂದು ಆಗ್ರಹಿಸಿದರು.