ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳ ಸ್ಥಳಾಂತರದ ಮೇಲ್ವಿಚಾರಣೆಗಾಗಿ ಸ್ಲೋವೆಕಿಯಾದಲ್ಲಿರುವ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ‘ಯುದ್ಧ ಪೀಡಿತ ದೇಶದಿಂದ ಕೊನೆಯ ಭಾರತೀಯನನ್ನು ಸ್ಥಳಾಂತರಿಸುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ಹೇಳಿದ್ದಾರೆ.
ಆಪರೇಷನ್ ಗಂಗಾದ ಅಡಿಯಲ್ಲಿ ಉಕ್ರೇನ್ ನೆರೆಯ ದೇಶಗಳ ಮೂಲಕ ಭಾರತೀಯ ಪ್ರಜೆಗಳನ್ನು ತಾಯ್ನಾಡಿಗೆ ಮರಳಿ ತರುತ್ತಿರುವ ಪ್ರಕ್ರಿಯೆಯ ಮೇಲ್ವಿಚಾರಣೆಯನ್ನು ಮಾಡಲು ಕೇಂದ್ರ ಸರ್ಕಾರವು ನಿಯೋಜಿಸಿರುವ ನಾಲ್ವರು ವಿಶೇಷ ರಾಯಭಾರಿಗಳ ಪೈಕಿ ಕೇಂದ್ರ ಸಚಿವ ಕಿರಣ್ ರಿಜಿಜು ಕೂಡ ಒಬ್ಬರಾಗಿದ್ದಾರೆ. ಕಿರಣ್ ರಿಜಿಜು ಬುಧವಾರದಂದು ಸ್ಲೋವೆಕಿಯಾದ ಕೊಸಿಸ್ ನಗರವನ್ನು ತಲುಪಿದ್ದಾರೆ.
ಕೋಸಿಸ್ ತಲುಪಿದ ಬಳಿಕ ಭಾರತೀಯ ವಿದ್ಯಾರ್ಥಿಗಳ ಜೊತೆಯಲ್ಲಿ ಸಂವಾದ ನಡೆಸಿದ ಕೇಂದ್ರ ಸಚಿವ ಕಿರಣ್ ರಿಜಿಜು ಎಲ್ಲರನ್ನು ಸುರಕ್ಷಿತವಾಗಿ ಇಲ್ಲಿಂದ ಸ್ಥಳಾಂತರಿಸುವುದು ನಮ್ಮ ಆದ್ಯತೆಯಾಗಿದೆ. ಪ್ರತಿಯೊಬ್ಬರನ್ನು ಸುರಕ್ಷಿತವಾಗಿ ಭಾರತಕ್ಕೆ ಮರಳಿ ತರುತ್ತೇವೆ ಎಂದು ನಾವು ಎಲ್ಲರಿಗೂ ಭರವಸೆ ನೀಡಿದ್ದೇವೆ.
ಇದು ಪ್ರಧಾನಿ ಮೋದಿಯ ನಿರ್ದೇಶನ ಕೂಡ ಹೌದು. ನಾವು ಯಾರನ್ನೂ ಇಲ್ಲಿ ಬಿಟ್ಟು ಹೋಗುವುದಿಲ್ಲ. ಯುದ್ಧ ಪೀಡಿತ ಸ್ಥಳದಲ್ಲಿ ಇರುವವರನ್ನು ತಲುಪಲು ಕೆಲವು ಸವಾಲುಗಳಿವೆ. ಅಲ್ಲಿ ಬಾಂಬ್ ದಾಳಿ ಹಾಗೂ ಫೈರಿಂಗ್ ನಡೆಯುತ್ತಿರೋದ್ರಿಂದ ನಮ್ಮ ರಾಯಭಾರಿ ಕಚೇರಿಯ ಸಿಬ್ಬಂದಿಗೂ ಅಲ್ಲಿ ತಲುಪಲು ಸಾಧ್ಯವಾಗುತ್ತಿಲ್ಲ, ಜನರನ್ನು ಸ್ಥಳಾಂತರಿಸುವುದು ಸುಲಭದ ಕೆಲಸವಲ್ಲ. ಆದರೆ ನಾವು ನಮ್ಮೆಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.
ಕೇಂದ್ರ ಸರ್ಕಾರವು ಭಾರತೀಯರನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಲು ಎಲ್ಲಾ ರೀತಿಯ ಪ್ರಯತ್ನಗಳನ್ನೂ ಮಾಡುತ್ತಿದೆ. ಉಕ್ರೇನ್ನಿಂದ ಕೊನೆಯ ಭಾರತೀಯನನ್ನು ಸ್ಥಳಾಂತರಿಸುವವರೆಗೂ ನಾವು ಈ ಸ್ಥಳವನ್ನು ಬಿಡುವುದಿಲ್ಲ ಎಂದು ಹೇಳಿದ್ದಾರೆ.