ಉಕ್ರೇನ್ ಮೇಲೆ ರಷ್ಯಾ ಆರಂಭಿಸಿರುವ ಯುದ್ಧ ದಿನೇದಿನೇ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಅಲ್ಲಿ ಸಿಲುಕಿಕೊಂಡಿರುವ ಭಾರತವೂ ಸೇರಿದಂತೆ ವಿವಿಧ ದೇಶಗಳ ವಿದ್ಯಾರ್ಥಿಗಳು ಸಂಕಷ್ಟಕ್ಕೀಡಾಗಿದ್ದಾರೆ. ಹೇಗಾದರೂ ಮಾಡಿ ಗಡಿ ದಾಟುವ ಮೂಲಕ ಸುರಕ್ಷಿತವಾಗಿ ತಮ್ಮ ತಮ್ಮ ದೇಶಗಳಿಗೆ ಸೇರಿಕೊಳ್ಳಲು ಈ ವಿದ್ಯಾರ್ಥಿಗಳು ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ.
ಇದರ ಮಧ್ಯೆ ಭಾರತ ಅಲ್ಲಿ ಸಿಲುಕಿಕೊಂಡಿರುವ ತನ್ನ ದೇಶದ ವಿದ್ಯಾರ್ಥಿಗಳನ್ನು ಕರೆತರಲು ಗಡಿಭಾಗದಲ್ಲಿ ವಿಮಾನ ಸೇವೆಯನ್ನು ಆರಂಭಿಸಿದೆ. ಈಗಾಗಲೇ ಸಾವಿರಾರು ವಿದ್ಯಾರ್ಥಿಗಳನ್ನು ಭಾರತಕ್ಕೆ ಕರೆತರಲಾಗಿದ್ದು, ಇನ್ನುಳಿದವರನ್ನು ಮರಳಿ ತರಲು ವಿಮಾನಸೇವೆ ಮುಂದುವರೆದಿದೆ. ಗಡಿ ಭಾಗಕ್ಕೆ ಬರುವ ವೇಳೆ ಭಾರತದ ವಿದ್ಯಾರ್ಥಿಗಳು ತಮ್ಮ ವಾಹನಗಳ ಮೇಲೆ ತ್ರಿವರ್ಣ ಧ್ವಜ ಇರುವಂತೆ ನೋಡಿಕೊಳ್ಳಲು ಕೇಂದ್ರ ವಿದೇಶಾಂಗ ಸಚಿವಾಲಯದಿಂದ ಸೂಚಿಸಲಾಗಿದೆ.
ಭಾರತದ ತ್ರಿವರ್ಣ ಧ್ವಜ ಈಗ ಪಾಕ್ ವಿದ್ಯಾರ್ಥಿಗಳಿಗೂ ಆಸರೆಯಾಗಿದೆ ಎನ್ನಲಾಗಿದ್ದು, ಅವರುಗಳು ಸಹ ತಮ್ಮ ವಾಹನದ ಮೇಲೆ, ಕೈಗಳಲ್ಲಿ ತ್ರಿವರ್ಣ ಧ್ವಜವನ್ನು ಹಿಡಿದುಕೊಂಡು ಬಂದು ಸುರಕ್ಷಿತವಾಗಿ ಗಡಿ ದಾಟುತ್ತಿದ್ದಾರೆ ಎನ್ನಲಾಗಿದೆ. ಇದಕ್ಕಾಗಿ ಅವರುಗಳು ಸ್ವತಃ ಭಾರತದ ಧ್ವಜವನ್ನು ತಯಾರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ.