ಅಂತರ್ಜಾಲವು ಮಾಹಿತಿಯ ವಿಶಾಲ ಭಂಡಾರವಾಗಿದೆ. ಕೆಲವೇ ಸೆಕೆಂಡುಗಳಲ್ಲಿ ಜನರು ತಮಗೆ ಬೇಕಾದುದನ್ನು ತಿಳಿದುಕೊಳ್ಳಬಹುದು. ಬ್ರೆಜಿಲ್‌ನಲ್ಲಿ ಒಂಬತ್ತು ವರ್ಷದ ಬಾಲಕನೊಬ್ಬ ಇದನ್ನೇ ಮಾಡಿದ್ದಾನೆ. ಮನೆಯಿಂದ ಸುಮಾರು 2,700 ಕಿಲೋಮೀಟರ್‌ಗಳಷ್ಟು ದೂರ ಪ್ರಯಾಣಿಸಲು ಗೂಗಲ್ ಸಹಾಯ ಪಡೆದಿದ್ದಾನೆ.
ಬಾಲಕನು ಮನೌಸ್‌ನಲ್ಲಿರುವ ತನ್ನ ಮನೆಯಿಂದ ಓಡಿಹೋಗಿ, ಗ್ರೇಟರ್ ಸಾವೊ ಪಾಲೊದಲ್ಲಿನ ಗೌರುಲ್ಹೋಸ್‌ಗೆ ತಲುಪಲು ಲತಮ್ ಏರ್‌ಲೈನ್ಸ್ ವಿಮಾನಕ್ಕೆ ನುಸುಳಿದ್ದಾನೆ. ವಿಮಾನದ ಸಿಬ್ಬಂದಿ ಅಪ್ರಾಪ್ತ ಬಾಲಕನನ್ನು ಗಮನಿಸಿದ್ದಾರೆ. ಕೂಡಲೇ ಫೆಡರಲ್ ಪೊಲೀಸ್ ಮತ್ತು ಗಾರ್ಡಿಯನ್‌ಶಿಪ್ ಕೌನ್ಸಿಲ್‌ಗೆ ಸೂಚನೆ ನೀಡಿದ್ದಾರೆ. ನಂತರ ಅಧಿಕಾರಿಗಳು ಬಾಲಕನ ಬಗ್ಗೆ ಮಾಹಿತಿ ಪಡೆಯಲು ಮುಂದಾಗಿದ್ದಾರೆ.
ಬಾಲಕನನ್ನು ಇಮ್ಯಾನುಯೆಲ್ ಮಾರ್ಕ್ವೆಸ್ ಡಿ ಒಲಿವೇರಾ ಎಂದು ಗುರುತಿಸಲಾಗಿದೆ. ಫೆಬ್ರವರಿ 26 ರಂದು ಅವನ ತಾಯಿ ಡೇನಿಯಲ್ ಮಾರ್ಕ್ವೆಸ್ ತನ್ನ ಮಗ ಕಾಣೆಯಾಗಿರುವುದಾಗಿ ದೂರು ನೀಡಿದ್ದರು. ಅಂದು ರಾತ್ರಿ 10 ಗಂಟೆಗೆ ಬಾಲಕನ ಇರುವಿಕೆಯ ಕುರಿತು ತಾಯಿಗೆ ಕರೆ ಬಂದಿತ್ತು. ವಿಮಾನ ಹತ್ತಿದ ಬಾಲಕನ ಬಳಿ ಯಾವುದೇ ದಾಖಲೆಗಳು ಇರಲಿಲ್ಲ.
ಬಾಲಕನನ್ನು ಗಾರ್ಡಿಯನ್‌ಶಿಪ್ ಕೌನ್ಸಿಲ್‌ನ ಆರೈಕೆಯಲ್ಲಿರಿಸಲಾಯಿತು ಮತ್ತು ಮರುದಿನ ಬಾಲಕನನ್ನು ಸುರಕ್ಷಿತವಾಗಿ ಮನೆಗೆ ಕಳುಹಿಸಲಾಯಿತು.
ಇನ್ನು ವಿಮಾನ ನಿಲ್ದಾಣದ ಅಧಿಕಾರಿಗಳು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಲತಮ್ ಏರ್‌ಲೈನ್ಸ್ ಬ್ರೆಜಿಲ್ ರೆವಿಸ್ಟಾ ಸೆನಾರಿಯಂಗೆ ಈ ಘಟನೆಯ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ತಿಳಿಸಿದೆ. ಮಗುವಿಗೆ ಕೌಟುಂಬಿಕ ಹಿಂಸಾಚಾರದ ಇತಿಹಾಸವಿಲ್ಲ. ಇತರ ಸಂಬಂಧಿಕರೊಂದಿಗೆ ಸಾವೊ ಪಾಲೊದಲ್ಲಿ ವಾಸಿಸುವ ಬಯಕೆಯೇ, ಬಾಲಕನ ಪ್ರವಾಸಕ್ಕೆ ಕಾರಣ ಎಂದು ತನಿಖೆಯು ಬಹಿರಂಗಪಡಿಸಿದೆ.