ಹಿಂದೆ ಬ್ಯಾಂಕ್ ಗಳು ಶೇಕಡಾ 8-9 ರ ಬಡ್ಡಿ ದರದಲ್ಲಿ ಗೃಹ ಸಾಲವನ್ನು ನೀಡ್ತಿದ್ದವು. ಆದ್ರೀಗ ಬ್ಯಾಂಕ್ ಗೃಹ ಸಾಲದ ಮೇಲಿನ ಬಡ್ಡಿಯನ್ನು ಕಡಿಮೆ ಮಾಡಿದೆ. ಅಂದ್ರೆ ಶೇಕಡಾ 7ರ ಬಡ್ಡಿ ದರದಲ್ಲಿ ಅನೇಕ ಬ್ಯಾಂಕ್ ಗಳು ಸಾಲ ನೀಡ್ತಿವೆ. ನೀವು ಈಗಾಗಲೇ ಸಾಲ ಪಡೆದಿದ್ದು, ಬಡ್ಡಿ ಪಾವತಿ ಮಾಡ್ತಿದ್ದರೆ ಇಎಂಐ ಕಡಿಮೆ ಮಾಡಲು ಪ್ಲಾನ್ ಒಂದಿದೆ.
ನೀವು ಸಾಲವನ್ನು ಒಂದು ಬ್ಯಾಂಕ್ ನಿಂದ ಇನ್ನೊಂದು ಬ್ಯಾಂಕ್ ಗೆ ವರ್ಗಾಯಿಸುವ ಮೂಲಕ ಇಎಂಐ ಕಡಿಮೆ ಮಾಡಿಕೊಳ್ಳಬಹುದು. ಸುಮಾರು 5000 ರೂಪಾಯಿಯಷ್ಟು ಇಎಂಐ ಇದ್ರಿಂದ ಕಡಿಮೆಯಾಗುತ್ತದೆ. ಆದ್ರೆ ಇದಕ್ಕೆ ನೀವು ಕೆಲವೊಂದು ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ಮೊದಲು ಹಳೆಯ ಮತ್ತು ಹೊಸ ಇಎಂಐನಲ್ಲಿ ಎಷ್ಟು ವ್ಯತ್ಯಾಸ ಬರುತ್ತದೆ ಎಂಬುದನ್ನು ನೀವು ತಿಳಿಯಬೇಕು.
ಉದಾಹರಣೆಗೆ 2017 ರಲ್ಲಿ ನೀವು ಸಾಲ ಪಡೆದಿದ್ದೀರಿ. ಆಗ ಸಾಲದ ಮೇಲಿನ ಬಡ್ಡಿ ಶೇಕಡಾ 9.25 ರಷ್ಟಾಗಿತ್ತು ಎಂದುಕೊಳ್ಳೋಣ. ಈಗ ಹೊಸ ಬ್ಯಾಂಕ್ ಬಡ್ಡಿ ಶೇಕಡಾ 7 ಎಂದಾದ್ರೆ ಎಷ್ಟು ಇಎಂಐ ಕಡಿಮೆಯಾಗುತ್ತದೆ ಎಂಬುದನ್ನು ತಿಳಿಯಬೇಕು.
ಸಾಲವನ್ನು 2017 ರಲ್ಲಿ 30 ಲಕ್ಷ ಸಾಲವನ್ನು 20 ವರ್ಷದ ಅವಧಿಗೆ ತೆಗೆದುಕೊಂಡಿದ್ದು, ನೀವು ಶೇಕಡಾ 9.25 ರಲ್ಲಿ ಬಡ್ಡಿ ಪಾವತಿ ಮಾಡ್ತಿದ್ದರೆ ನಿಮಗೆ 27,476 ರೂಪಾಯಿ ಇಎಂಐ ಬರುತ್ತದೆ. 2021ರಲ್ಲಿ ನೀವು ಶೇಕಡಾ 7ರ ಬಡ್ಡಿಯಿರುವ ಬ್ಯಾಂಕ್ ಗೆ ಸಾಲವನ್ನು ವರ್ಗಾಯಿಸಿದ್ದರೆ ನೀವು 26 ಲಕ್ಷ ರೂಪಾಯಿಯನ್ನು 16 ವರ್ಷದಲ್ಲಿ ತೀರಿಸಬೇಕು.
ಅಂದ್ರೆ ನಿಮಗೆ ತಿಂಗಳಿಗೆ 22,400 ರೂಪಾಯಿ ಇಎಂಐ ಬರುತ್ತದೆ. ಪ್ರತಿ ತಿಂಗಳು ಸುಮಾರು 5 ಸಾವಿರ ರೂಪಾಯಿ ಉಳಿದಂತಾಗುತ್ತದೆ. ಬ್ಯಾಂಕ್ ಸಾಲವನ್ನು ವರ್ಗಾಯಿಸಲು ಕೆಲವೊಂದು ನಿಯಮಗಳಿವೆ. ಎಲ್ಲವನ್ನೂ ಪರಿಶೀಲಿಸಿ,ಇಎಂಐನಲ್ಲಿ ಹಣ ಉಳಿಯುತ್ತದೆ ಎಂದಾದ್ರೆ ಮಾತ್ರ ಸಾಲವನ್ನು ವರ್ಗಾಯಿಸಿ.