ದೇಶದಲ್ಲಿ ತಂಬಾಕು ಸೇವನೆ ಹಾಗೂ ಜಾಹೀರಾತನ್ನು ನಿಷೇಧಿಸಲಾಗಿದೆ. 2019ರಲ್ಲೇ ಕೇಂದ್ರ ಸರ್ಕಾರ ಈ ಕಾನೂನನ್ನು ಜಾರಿ ಮಾಡಿದೆ. ಆದರೂ ಇದ್ಯಾವುದಕ್ಕೂ ಬ್ರೇಕ್ ಬಿದ್ದಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ತಂಬಾಕು ಸೇವನೆ ಹಾಗೂ ಮಾರಾಟದ ಜಾಹೀರಾತುಗಳು ನಿರಾತಂಕವಾಗಿ ಹರಿದಾಡುತ್ತಿವೆ.
ನ್ಯಾಷನಲ್ ಲಾ ಸ್ಕೂಲ್ ಹಾಗೂ ಕನ್ಸ್ಯೂಮರ್ ಲಾ & ಪ್ರಾಕ್ಟೀಸಸ್ ನಡೆಸಿದ ಸಮೀಕ್ಷೆಯಲ್ಲಿ ಈ ಆಘಾತಕಾರಿ ಅಂಶ ಬಹಿರಂಗವಾಗಿದೆ. ಫೇಸ್ಬುಕ್, ಟ್ವಿಟ್ಟರ್, ಇನ್ ಸ್ಟಾಗ್ರಾಮ್ ಸೇರಿದಂತೆ ಹಲವು ಜಾಲತಾಣಗಳಲ್ಲಿ ತಂಬಾಕಿಗೆ ಸಂಬಂಧಪಟ್ಟ ಜಾಹೀರಾತುಗಳು ರಾರಾಜಿಸುತ್ತಿವೆ.
ಆನ್‌ಲೈನ್ ಮೂಲಕ ನಡೆಸಿದ ಸಮೀಕ್ಷೆಯಲ್ಲಿ 4,049 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸಮೀಕ್ಷೆಯ ಅನುಸಾರ ನಿಷೇಧಿತ ತಂಬಾಕು ಸೇವನೆ ಮತ್ತು ಮಾರಾಟ ಪ್ರಮಾಣ ಕರ್ನಾಟಕದಲ್ಲೇ ಅತ್ಯಂತ ಹೆಚ್ಚು. ಮಹಾರಾಷ್ಟ್ರ, ತಮಿಳುನಾಡು, ಉತ್ತರ ಪ್ರದೇಶ ಹಾಗೂ ಕೇರಳ ನಂತರದ ಸ್ಥಾನದಲ್ಲಿವೆ.
ಅಧಿಕಾರಿಗಳು ನೀಡೋ ಮಾಹಿತಿ ಪ್ರಕಾರ ಸಾಮಾಜಿಕ ಜಾಲತಾಣಗಳಲ್ಲಿ ಇ-ಸಿಗರೇಟುಗಳಿಗೆ ಹೆಚ್ಚಿನ ಪ್ರಚಾರ ಸಿಗುತ್ತಿದೆಯಂತೆ. ನಿಷೇಧಿತ ಇ-ಸಿಗರೇಟ್ ಗಳ ಬಗ್ಗೆ ಟೆಲಿಗ್ರಾಂನಲ್ಲಿ ಜಾಹೀರಾತುಗಳು ಹರಿದಾಡ್ತಿವೆ.
ಉಳಿದಂತೆ ವಾಟ್ಸಾಪ್, ಫೇಸ್ಬುಕ್, ಟಿಕ್ ಟಾಕ್, ಟ್ವಿಟ್ಟರ್ ನಲ್ಲೂ ಇವುಗಳದ್ದೇ ಹಾವಳಿ. ಯುವಜನತೆ ಹೆಚ್ಚಾಗಿ ಸಾಮಾಜಿಕ ಜಾಲತಾಣಗಳಿಗೆ ಅಂಟಿಕೊಂಡಿರೋದ್ರಿಂದ ಇಂತಹ ಮಾದಕ ವ್ಯಸನಕ್ಕೆ ಸುಲಭವಾಗಿ ಬೀಳುತ್ತಿದ್ದಾರೆ. ಹಾಗಾಗಿ ಆದಷ್ಟು ಬೇಗ ಸರ್ಕಾರ ಇದಕ್ಕೆಲ್ಲ ಬ್ರೇಕ್ ಹಾಕಬೇಕಿದೆ.