ಯುಪಿಐ ಪ್ಲಾಟ್ಫಾರ್ಮ್ನಲ್ಲಿನ ಭಾರತದ ನಗದು ರಹಿತ ಚಿಲ್ಲರೆ ವಹಿವಾಟು ಫೆಬ್ರವರಿಯಲ್ಲಿ 8.27 ಲಕ್ಷ ಕೋಟಿ ರೂ.ಗಳಾಗಿದ್ದು, ಹಿಂದಿನ ತಿಂಗಳಿನಲ್ಲಿ ದಾಖಲಾದ ಮೊತ್ತಕ್ಕಿಂತ ಇಳಿಕೆಯಾಗಿದೆ. ಈ ಸಂಬಂಧ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್ಪಿಸಿಐ) ಅಂಕಿಅಂಶಗಳನ್ನು ತೋರಿಸಿದೆ.
ಫೆಬ್ರವರಿ 2022ರಲ್ಲಿ ಒಟ್ಟು 452 ಕೋಟಿ (4.52 ಬಿಲಿಯನ್) ವಹಿವಾಟುಗಳು ನಡೆದಿವೆ. ಜನವರಿಯಲ್ಲಿ, ಭೀಮ್ ಯುಪಿಐ ಪ್ಲಾಟ್ಫಾರ್ಮ್ನಲ್ಲಿ ನಗದು ರಹಿತ ಚಿಲ್ಲರೆ ವಹಿವಾಟಿನ ಮೌಲ್ಯವು 8.32 ಲಕ್ಷ ಕೋಟಿ ರೂ.ಗಳಷ್ಟಿದ್ದರೆ, ಒಟ್ಟು ವಹಿವಾಟುಗಳ ಸಂಖ್ಯೆ 461 ಕೋಟಿ (4.61 ಶತಕೋಟಿ) ರೂ. ಆಗಿತ್ತು.
ಅಂದಹಾಗೆ, ಎನ್ಇಟಿಸಿ ಫಾಸ್ಟ್ಯಾಗ್ ತಂತ್ರಜ್ಞಾನದ ಮೂಲಕ ಟೋಲ್ ಪ್ಲಾಜಾಗಳಲ್ಲಿ ಸ್ವಯಂಚಾಲಿತ ಸಂಗ್ರಹದ ಮೌಲ್ಯದಲ್ಲಿ ಸ್ವಲ್ಪ ಏರಿಕೆ ಕಂಡುಬಂದಿದೆ. ಫೆಬ್ರವರಿಯಲ್ಲಿ 3,631.22 ಕೋಟಿ ಮೌಲ್ಯದ 24.36 ಕೋಟಿ ವಹಿವಾಟುಗಳು (243.64 ಮಿಲಿಯನ್) ನಡೆದಿವೆ ಎಂದು ಎನ್ಪಿಸಿಐ ತಿಳಿಸಿದೆ.
ಮತ್ತೊಂದೆಡೆ, 24×7 ಐಎಂಪಿಎಸ್ (ತಕ್ಷಣದ ಪಾವತಿ ಸೇವೆ) ಮೂಲಕ ತ್ವರಿತ ಹಣ ವರ್ಗಾವಣೆಯು ಫೆಬ್ರವರಿಯಲ್ಲಿ 3.84 ಲಕ್ಷ ಕೋಟಿಗೆ ಇಳಿದಿದೆ.