ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಸಹಾಯಕಿಯರ ಹುದ್ದೆಯನ್ನು ಭರ್ತಿ ಮಾಡಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ಗೌರವಧನ ಆಧಾರದ ಮೇಲೆ ಕಾರ್ಯಕರ್ತೆಯರಿಗೆ 10 ಸಾವಿರ ರೂ. ಮತ್ತು ಸಹಾಯಕಿಯರಿಗೆ 5 ಸಾವಿರ ರೂ., ಮಿನಿ ಅಂಗನವಾಡಿ ಕಾರ್ಯಕರ್ತೆಯರಿಗೆ 6250 ರೂ. ಪಾವತಿಸಲಾಗುವುದು.
ಕೊಡಗು, ಬಳ್ಳಾರಿ, ಮೈಸೂರು, ತುಮಕೂರು, ಚಿಕ್ಕಮಗಳೂರು, ಹಾವೇರಿ, ವಿಜಯಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ಅರ್ಜಿ ಸಲ್ಲಿಸಲು ಕಾರ್ಯಕರ್ತೆ ಹುದ್ದೆಗೆ 10ನೇ ತರಗತಿ ತೇರ್ಗಡೆ ಹಾಗೂ ಸಹಾಯಕಿ ಹುದ್ದೆಗೆ 4 ರಿಂದ 9ನೇ ತರಗತಿಯೊಳಗೆ ವ್ಯಾಸಂಗ ಮಾಡಿರಬೇಕು. 18 ರಿಂದ 35 ವರ್ಷ ವಯೋಮಿತಿಯೊಳಗಿರುವ ಹಾಗೂ ಅಂಗನವಾಡಿ ಕೇಂದ್ರಕ್ಕೆ ಒಳಪಟ್ಟ ಗ್ರಾಮ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಮಹಿಳಾ ಅಭ್ಯರ್ಥಿಗಳು ಮಾತ್ರ ಅರ್ಹರಾಗಿರುತ್ತಾರೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ವೆಬ್ಸೈಟ್ www.anganwadirecruit.kar.nic.in ನಲ್ಲಿ ಅರ್ಜಿ ಭರ್ತಿ ಮಾಡಬಹುದಾಗಿದೆ. ಆನ್ಲೈನ್ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕಾಗಿದೆ ಎನ್ನಲಾಗಿದೆ.