ಕೀವ್: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ ಮುಂದುವರೆಸಿದೆ. ಈಗಾಗಲೇ ಉಕ್ರೇನ್ ನ ಹಲವು ಪ್ರದೇಶಗಳನ್ನು ವಶಕ್ಕೆ ಪಡೆದಿರುವ ರಷ್ಯಾ, ರಾಜಧಾನಿ ಕೀವ್, ಖಾರ್ಕಿವ್ ನಗರಗಳನ್ನು ತನ್ನ ಕೈವಶ ಮಾಡಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದೆ. ಆದರೆ ಉಕ್ರೇನ್ ಸೇನಾಪಡೆಗಳು ರಷ್ಯಾ ಸೇನೆ ಹಿಮ್ಮೆಟ್ಟಿಸಲು ಮುಂದಾಗಿದ್ದಾರೆ.
ಉಕ್ರೇನ್ ನಲ್ಲಿ ರಷ್ಯಾ ಜನವಸತಿ ಪ್ರದೇಶಗಳನ್ನು, ನಾಗರಿಕರನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದ್ದು, ನರಮೇಧ ನಡೆಸುತ್ತಿದೆ ಎಂದು ಉಕ್ರೇನ್ ಅಧ್ಯಕ್ಷ ಝಲೆನ್ಸ್ಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ರಷ್ಯಾ ವಿರುದ್ಧ ಉಕ್ರೇನ್ ಸೇನೆ ಪ್ರಬಲ ಹೋರಾಟ ನಡೆಸುತ್ತಿದ್ದು, ರಷ್ಯಾ ಮೇಜರ್ ಜನರಲ್ ಓರ್ವರನ್ನು ವಶಕ್ಕೆ ಪಡೆದಿದೆ. ಈ ವಿಡಿಯೋ ಮಾಧ್ಯಮಗಳಲ್ಲಿ ವೈರಲ್ ಆಗಿವೆ.
ತವರಿಗೆ ಮರಳಲು ಸಿದ್ಧಳಿಲ್ಲ ಉಕ್ರೇನ್ ನಲ್ಲಿ ಸಿಲುಕಿರೋ ಭಾರತದ ವಿದ್ಯಾರ್ಥಿನಿ: ಕಾರಣ ಗೊತ್ತಾ….?
ಮತ್ತೊಂದೆಡೆ ಖಾರ್ಕಿವ್ ನಗರದಲ್ಲಿ ರಷ್ಯಾ ಸೈನಿಕನನ್ನು ಸೆರೆ ಹಿಡಿದ ಉಕ್ರೇನ್ ಮಿಲಿಟರಿ ಪಡೆ ಯುದ್ಧ ನಿಲ್ಲಿಸಿ ಇಲ್ಲದಿದ್ದರೆ ನರಕಯಾತನೆ ಅನುಭವಿಸಿ ಎಂದು ಕಿಡಿಕಾರಿದ್ದಾರೆ. ರಷ್ಯಾ ಸೈನಿಕರಿಗೆ ’ವೆಲ್ ಕಮ್ ಟು ಹೆಲ್’ ಎಂಬ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಇದೇ ವೇಳೆ ಚೆರ್ನಿ ಹಿವ್ ನಲ್ಲಿ ರಷ್ಯಾ ಯುದ್ಧ ಟ್ಯಾಂಕರ್ ನ್ನು ತಡೆದ ಉಕ್ರೇನ್ ನಾಗರಿಕರು ಟ್ಯಾಂಕರ್ ಸುತ್ತುವರೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇರ್ಫಿನ್ ನಗರದಲ್ಲಿಯೂ ರಷ್ಯಾ ಸೇನೆ ಪ್ರವೇಶಿಸದಂತೆ ತಡೆಯೊಡ್ಡಿದ್ದಾರೆ.
ಉಕ್ರೇನ್ ಹೆಲಿಕಾಪ್ಟರ್ ಗಳು ರಷ್ಯಾ ಸೇನೆ, ಬೆಂಗಾವಲು ಪಡೆ ಮೇಲೆ ದಾಳಿ ನಡೆಸಿದ್ದು, ಗೊಸ್ಟೊಮೆಲ್ ನಲ್ಲಿ ರಾಕೆಟ್ ದಾಳಿ ನಡೆಸಿ ಶಸ್ತ್ರಾಸ್ತ್ರ ವಾಹನಗಳನ್ನು ಧ್ವಂಸಗೊಳಿಸಿವೆ. ಈ ನಡುವೆ ಖಾರ್ಕಿವ್ ನಗರ ಸಂಪೂರ್ಣ ನಮ್ಮ ವಶದಲ್ಲಿಯೇ ಇದೆ ಎಂದು ಉಕ್ರೇನ್ ತಿಳಿಸಿದೆ.