ಕೀವ್: ಉಕ್ರೇನ್ ಮೇಲೆ ಯುದ್ಧ ಮುಂದುವರೆಸಿರುವ ರಷ್ಯಾ ರಣಭೀಕರ ದಾಳಿ ನಡೆಸುತ್ತಿದೆ. ಪುಟ್ಟ ರಾಷ್ಟ್ರವಾದರೂ ಉಕ್ರೇನ್, ರಷ್ಯಾ ಸೇನೆಯನ್ನು ಪ್ರಬಲವಾಗಿ ಎದುರಿಸುತ್ತಿದೆ. ಈ ನಡುವೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ ನೊಂದಿಗೆ ಮಾತುಕತೆಗೆ ಸಿದ್ಧ ಎಂದು ತಿಳಿಸಿದ್ದು, ನಿಯೋಗವೊಂದನ್ನು ಕಳುಹಿಸಿದ್ದಾರೆ.
ಮಾತುಕತೆ ನಡೆಸಲು ಬೆಲಾರಸ್ ಗೆ ಬರುವಂತೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರಿಗೆ ರಷ್ಯಾ ಆಹ್ವಾನಿಸಿದೆ. ಅಲ್ಲದೇ ರಷ್ಯಾದ ನಿಯೋಗವೊಂದು ಬೆಲಾರಸ್ ಗೆ ಆಗಮಿಸಿದೆ ಎಂದು ಕ್ರೆಮ್ಲಿನ್ ವಕ್ತಾರರು ತಿಳಿಸಿದ್ದಾರೆ.
ರಷ್ಯಾದೊಂದಿಗೆ ಮಾತುಕತೆಗೆ ಸಿದ್ಧ ಆದರೆ ಮೊದಲು ರಷ್ಯಾ ಯುದ್ಧ ನಿಲ್ಲಿಸಲಿ. ನಾಗರಿಕರ ಮೇಲೆ ರಷ್ಯಾ ಸೇನೆ ದಾಳಿ ನಡೆಸುತ್ತಿದೆ. ಅಲ್ಲದೇ ಬೆಲಾರಸ್ ನಲ್ಲಿ ಮಾತುಕತೆ ಸಾಧ್ಯವಿಲ್ಲ. ಬೆಲಾರಸ್ ಬದಲಾಗಿ ಬೇರೊಂದು ಸ್ಥಳದಲ್ಲಿ ಮಾತುಕತೆಗೆ ಸಿದ್ಧ ಎಂದು ತಿಳಿಸಿದ್ದಾರೆ.
ರಷ್ಯಾ ಜತೆ ಮಾತುಕತೆಗೆ ಉಕ್ರೇನ್ ಸಿದ್ಧವಿದೆ ಆದರೆ ಬೆಲಾರಸ್ ನಲ್ಲಿ ಅಲ್ಲ. ರಷ್ಯಾ ತನ್ನ ದಾಳಿಗಾಗಿ ಬೆಲಾರಸ್ ನ್ನು ಲಾಂಚ್ ಪ್ಯಾಡ್ ನಂತೆ ಬಳಸುತ್ತಿದೆ. ಹೀಗಿರುವಾಗ ಅಲ್ಲಿ ಮಾತುಕತೆ ನಡೆಸಲು ನಾವು ಒಪ್ಪುವುದಿಲ್ಲ, ವಾರ್ಸಾ, ಬ್ರಟಿಸ್ಲಾವಾ, ಬುಡಾಪೆಸ್ಟ್, ಇಸ್ತಾಂಬುಲ್ ಮೊದಲಾದ ನಾವು ಸೂಚಿಸಿದ ಪ್ರದೇಶದಲ್ಲಿ ಮಾತುಕತೆಗೆ ಸಿದ್ಧ ಎಂದು ಸ್ಪಷ್ಟಪಡಿಸಿದ್ದಾರೆ.