ಬೆಂಗಳೂರು: ಯುದ್ಧಪೀಡಿತ ಉಕ್ರೇನ್ ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಭಾರತೀಯರ ರಕ್ಷಣಾ ಕಾರ್ಯಾಚರಣೆ ಆರಂಭವಾಗಿದ್ದು, ಇದೀಗ ರಾಜ್ಯದ ವಿದ್ಯಾರ್ಥಿಗಳು ಉಕ್ರೇನ್ ನಿಂದ ಸುರಕ್ಷಿತವಾಗಿ ವಾಪಸ್ ಆಗಿದ್ದಾರೆ.
ಉಕ್ರೇನ್ ನಿಂದ ರಾಜ್ಯಕ್ಕೆ ಆಗಮಿಸಿದ 12 ವಿದ್ಯಾರ್ಥಿಗಳನ್ನು ಕಂದಾಯ ಸಚಿವ ಆರ್.ಅಶೋಕ್, ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿ ಬರಮಾಡಿಕೊಂಡರು.
ನಿನ್ನೆ ಉಕ್ರೇನ್ ನಿಂದ ಮುಂಬೈಗೆ ಬಂದಿಳಿದಿದ್ದ ವಿದ್ಯಾರ್ಥಿಗಳು ಇಂದು ಮುಂಜಾನೆ ಮುಂಬೈನಿಂದ ವಿಮಾನದ ಮೂಲಕ ಬೆಂಗಳೂರಿನ ಕೆಐಎಗೆ ಆಗಮಿಸಿದ್ದಾರೆ. ಸುರಕ್ಷಿತವಾಗಿ ಮಕ್ಕಳನ್ನು ಕರೆತಂದ ರಾಜ್ಯ ಸರ್ಕಾರಕ್ಕೆ ಪೋಷಕರು ಧನ್ಯವಾದ ತಿಳಿಸಿದ್ದಾರೆ.