ಗುಜರಾತ್ ನ ಅಹಮದಾಬಾದ್ ನಲ್ಲಿ ವೈದ್ಯನೊಬ್ಬ ಪತ್ನಿ ಹಾಗೂ 7 ವರ್ಷದ ಮಗಳನ್ನು ಮನೆಯಿಂದ ಹೊರಹಾಕಿದ್ದಾನೆ. 20 ಲಕ್ಷ ರೂಪಾಯಿ ಹಣ ಕೊಡುವಂತೆ ಬೇಡಿಕೆ ಇಟ್ಟಿದ್ದಾನೆ. ರಾಜಸ್ತಾನ ಮೂಲದ ಈ ವೈದ್ಯ 2011ರಲ್ಲಿ ಮದುವೆಯಾಗಿದ್ದ.
ತನ್ನ ಹೆತ್ತವರೊಂದಿಗೆ ಸೇರಿಕೊಂಡು ವರದಕ್ಷಿಣೆ ತರುವಂತೆ ಪತ್ನಿಯನ್ನು ಪೀಡಿಸುತ್ತಿದ್ದ. ಆಕೆಗೆ ಹೆಣ್ಣು ಮಗು ಹುಟ್ಟಿದ ಮೇಲಂತೂ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತ್ತು. 2014ರಲ್ಲಿ ವೈದ್ಯ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ತಮಿಳುನಾಡಿನ ತಂಜಾವೂರಿಗೆ ಶಿಫ್ಟ್ ಆಗಿದ್ದ.
ಪತ್ನಿಯೂ ಅವನೊಂದಿಗೆ ತೆರಳಿದ್ಲು. ಆತ ಬೇರೊಂದು ಮಹಿಳೆ ಜೊತೆಗೆ ಅಕ್ರಮ ಸಂಬಂಧ ಹೊಂದಿರೋದು ಪತ್ನಿಗೆ ಗೊತ್ತಾಗಿತ್ತು. ಇದನ್ನು ಪ್ರಶ್ನಿಸಿದ್ದಕ್ಕೆ ಆಕೆಗೆ ಹೊಡೆದು, ಬಡಿದು ಹಿಂಸಿಸಿದ್ದ. ಆತನ ಹಿಂಸೆ ತಾಳಲಾರದೆ ಪತ್ನಿ ತವರಿಗೆ ಮರಳಿದ್ಲು.
ಆದ್ರೆ ಬಲವಂತವಾಗಿ ಹೊಂದಾಣಿಕೆ ಮಾಡಿಸಿ ಅವಳನ್ನು ಮತ್ತೆ ಪತಿಯ ಜೊತೆಗೇ ಕಳಿಸಲಾಗಿತ್ತು. 2020ರಲ್ಲಿ ಮತ್ತೆ 20 ಲಕ್ಷ ಹಣಕ್ಕಾಗಿ ವೈದ್ಯ ಬೇಡಿಕೆ ಇಟ್ಟಿದ್ದ. ಆಸ್ಪತ್ರೆ ಕಟ್ಟಿಸಲು ಹಣ ಬೇಕೆಂದು ಕೇಳಿದ್ದ. ಅದಕ್ಕೆ ಪತ್ನಿ ತವರು ಮನೆಯವರು ಒಪ್ಪದೇ ಇದ್ದಾಗ ಇಬ್ಬರನ್ನೂ ಮನೆಯಿಂದ ಹೊರಹಾಕಿದ್ದಾನೆ. ಈ ಬಗ್ಗೆ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾಳೆ.