ಕೈವ್: ರಷ್ಯಾದ ದಾಳಿಯ ನಡುವೆ ಉಕ್ರೇನಿಯನ್ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಗಳನ್ನು ಸ್ವಾತಂತ್ರ್ಯ ಎಂದು ಕರೆಯುವುದಾಗಿ ಹೇಳಲಾಗಿದೆ.
ರಷ್ಯಾದ ಆಕ್ರಮಣದೊಂದಿಗೆ ಉಕ್ರೇನ್ ನೆಲ ಕೆಲವು ಕೆಟ್ಟ ಘಟನೆಗಳಿಗೆ ಸಾಕ್ಷಿಯಾಗುತ್ತಿದೆ, ರಾಜಧಾನಿ ಕೈವ್ ನಿರಂತರವಾಗಿ ರಷ್ಯಾದ ಪಡೆಗಳಿಂದ ವಾಯು ಮತ್ತು ನೆಲದಿಂದ ದಾಳಿ ನಡೆಸುತ್ತಿದೆ. ಯುದ್ಧದ ಅವ್ಯವಸ್ಥೆ ಜೀವಂತವಾಗಿರುವ ಹೋರಾಟದ ಮಧ್ಯೆ, ಕೈವ್ ನಲ್ಲಿ ಬಾಂಬ್ ಸದ್ದುಗಳ ನಡುವೆ 23 ವರ್ಷದ ಮಿಯಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಇದು ಯುದ್ಧ ಪೀಡಿತ ಆಶ್ರಯ ತಾಣದಲ್ಲಿ ಸಂಭ್ರಮ ತಂದಿದ್ದು, ಸಂತೋಷದ ಕಾರಣವನ್ನು ಹಂಚಿಕೊಂಡ ಉಕ್ರೇನ್‌ನ ವಿದೇಶಾಂಗ ಸಚಿವಾಲಯ ಮಗುವಿಗೆ ಸ್ವಾತಂತ್ರ್ಯ ಎಂದು ಹೆಸರಿಸುವುದಾಗಿ ಹೇಳಿದೆ.
ಗುರುವಾರ ರಷ್ಯಾದ ಆಕ್ರಮಣ ಪ್ರಾರಂಭವಾದಾಗ ಮತ್ತು ಬಾಂಬ್ ಸೈರನ್ ಗಳು ರಾಜಧಾನಿ ಕೈವ್ ಅನ್ನು ಬೆಚ್ಚಿಬೀಳಿಸಿದಾಗ, ಗರ್ಭಿಣಿ ಮಿಯಾ ನಗರದ ಭೂಗತ ಮೆಟ್ರೋ ನಿಲ್ದಾಣದಲ್ಲಿ ಆಶ್ರಯ ಪಡೆದಳು.
ಸ್ಥಳೀಯ ಕಾಲಮಾನದ ಪ್ರಕಾರ ಶುಕ್ರವಾರ ಸಂಜೆ 6 ಗಂಟೆಗೆ ಮಹಿಳೆ ಹೆರಿಗೆ ನೋವಿನಿಂದ ಕಿರುಚಲು ಪ್ರಾರಂಭಿಸಿದಾಗ, ಕೈವ್ ಪೊಲೀಸರು ಮತ್ತು ಉಕ್ರೇನಿಯನ್ನರು ಸಹಾಯಕ್ಕೆ ಧಾವಿಸಿದರು. ಅಧಿಕಾರಿ ಮೈಕೋಲಾ ಶ್ಲಾಪಕ್ ಅವರು ರಾತ್ರಿ 8.30 ರ ಮೊದಲು ಮಗುವನ್ನು ಮಿಯಾಗೆ ಹೆರಿಗೆಗೆ ಸಹಾಯ ಮಾಡಿದರು ಮತ್ತು ಆಂಬ್ಯುಲೆನ್ಸ್ ಗೆ ಕರೆ ಮಾಡಿದರು, ಅಲ್ಲಿಗೆ ಬಂದ ಆಂಬುಲೆನ್ಸ್ ಇಬ್ಬರನ್ನೂ ಆಸ್ಪತ್ರೆಗೆ ಕರೆದೊಯ್ಯಿತು. ಹೆರಿಗೆ ತಂತರ ತಾಯಿ, ಮಗು ಆರೋಗ್ಯವಾಗಿದ್ದಾರೆ.
ಉಕ್ರೇನ್‌ನ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಶನಿವಾರದಂದು ಸಂತೋಷದ ಸುದ್ದಿಯನ್ನು ಹಂಚಿಕೊಂಡಿದೆ. ಕೈವ್ ನಗರದ ಆಶ್ರಯ ತಾಣದಲ್ಲಿ ಮಗು ಜನಿಸಿತು. ನೆಲದ ಕೆಳಗೆ, ಉರಿಯುತ್ತಿರುವ ಕಟ್ಟಡಗಳು ಮತ್ತು ರಷ್ಯಾದ ಟ್ಯಾಂಕರ್ ಗಳ ಪಕ್ಕದಲ್ಲಿ ಜನಿಸಿದ ಮಗುವಿಗೆ ಸ್ವಾತಂತ್ರ್ಯ ಎಂದು ಕರೆಯುತ್ತೇವೆ ಎಂದು ತಿಳಿಸಿದೆ.