ಮೆದುಳು ನಿಷ್ಕ್ರಿಯಗೊಂಡಿದ್ದ ತಮಿಳುನಾಡಿನ 18 ವರ್ಷದ ಯುವತಿಯ ಹೃದಯವನ್ನು ದಾನ ಮಾಡಲಾಗಿದೆ. ಟರ್ಮಿನಲ್ ಹೃದಯ ವೈಫಲ್ಯದಿಂದ ಬಳಲ್ತಾ ಇದ್ದ ಕಾಶ್ಮೀರಿ ಮಹಿಳೆಗೆ ಈ ಹೃದಯವನ್ನು ಅಳವಡಿಸಲಾಗಿದೆ. ಚಿಕಿತ್ಸೆಗಾಗಿ ಜೀವಂತ ಹೃದಯವನ್ನು 350 ಕಿಮೀ ದೂರಕ್ಕೆ ಕೊಂಡೊಯ್ಯಲಾಯ್ತು.
33 ವರ್ಷದ ಶೆಹಜಾದಿ ಫಾತಿಮಾ ಶ್ರೀನಗರ ಮೂಲದವರು. ಹೃದಯ ತೊಂದರೆಯಿಂದಾಗಿ ಕಳೆದ ಡಿಸೆಂಬರ್ 31 ರಿಂದ್ಲೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ರು. ಹೃದಯ ಕಸಿ ಮಾಡಿದರೆ ಮಾತ್ರ ಆಕೆ ಬದುಕುವ ಸಾಧ್ಯತೆಗಳಿತ್ತು.
ಅದೃಷ್ಟವಶಾತ್ ಕಾಶ್ಮೀರಿ ಮಹಿಳೆಗೆ ಸೂಕ್ತವಾದ ಹೃದಯ ಸಿಕ್ಕಿದ್ದು, ಗ್ರೀನ್ ಕಾರಿಡಾರ್ ಮೂಲಕ ಅದನ್ನು ತಂದು ಯಶಸ್ವಿಯಾಗಿ ಕಸಿ ಮಾಡಲಾಗಿದೆ. ಈ ಪ್ರಕ್ರಿಯೆಯ ವೆಚ್ಚವನ್ನೆಲ್ಲ ಚೆನ್ನೈನ ಎಂಜಿಎಂ ಆಸ್ಪತ್ರೆಯೇ ಭರಿಸಿದೆ.
ದಿನಗೂಲಿ ನೌಕರಳಾಗಿರೋ ಫಾತಿಮಾಳ ಬಳಿ ಶಸ್ತ್ರಚಿಕಿತ್ಸೆಗೂ ಹಣವಿರಲಿಲ್ಲ. ಐಶ್ವರ್ಯಾ ಟ್ರಸ್ಟ್ ಆಕೆಗೆ ನೆರವಾಗಿದೆ. 3000 ಕಿಮೀ ದೂರ ಪ್ರಯಾಣಿಸಿ, ಚೆನ್ನೈನ ಎಂಜಿಎಂ ಆಸ್ಪತ್ರೆಗೆ ಬಂದ ಫಾತಿಮಾ ಪುನರ್ಜನ್ಮ ಪಡೆದಿದ್ದಾರೆ.