
ರಾಜಸ್ತಾನದ ಸಿಕರ್ ಜಿಲ್ಲೆಯಲ್ಲಿ ಕೊಳವೆ ಬಾವಿಗೆ ಬಿದ್ದಿದ್ದ ನಾಲ್ಕೂವರೆ ವರ್ಷದ ಮಗು ಬದುಕಿ ಬಂದಿದೆ. 26 ಗಂಟೆಗಳ ಕಾಲ ನಡೆಸಿದ ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಿದೆ. ಬೋರ್ವೆಲ್ ಪಕ್ಕದಲ್ಲೇ ಗುಂಡಿ ಅಗೆದು ಮಗುವನ್ನು ಹೊರತೆಗೆದ ಸಿಬ್ಬಂದಿ ಕೂಡಲೇ, ಆಸ್ಪತ್ರೆಗೆ ರವಾನಿಸಿದ್ದಾರೆ.
ಮಗು ಆರೋಗ್ಯವಾಗಿದ್ದು, ಯಾವುದೇ ಅಪಾಯವಿಲ್ಲ ಅಂತಾ ಅಧಿಕಾರಿಗಳು ತಿಳಿಸಿದ್ದಾರೆ. ಮನೆಯ ಸಮೀಪದಲ್ಲೇ ಆಟವಾಡುತ್ತಿದ್ದ ಮಗು ಮಧ್ಯಾಹ್ನ 3 ಗಂಟೆ ವೇಳೆಗೆ 50 ಅಡಿ ಆಳದ ಕೊಳವೆ ಬಾವಿಯಲ್ಲಿ ಬಿದ್ದಿದೆ.
ರಕ್ಷಣಾ ಕಾರ್ಯಕ್ಕೆ ಧಾವಿಸಿ ಬಂದ ಸಿಬ್ಬಂದಿ ಪೈಪ್ ಮೂಲಕ ಮಗುವಿಗೆ ಆಕ್ಸಿಜನ್ ಪೂರೈಸಿದ್ದಾರೆ. ಡಜನ್ ಗಟ್ಟಲೆ ಆಕ್ಸಿಜನ್ ಸಿಲಿಂಡರ್ ಗಳನ್ನು ಬಳಸಲಾಗಿದೆ. ಮಗುವಿಗೆ ಹಾಲು, ನೀರು ಮತ್ತು ಬಿಸ್ಕೆಟ್ ಅನ್ನು ಹಗ್ಗದ ಮೂಲಕ ನೀಡಲಾಯ್ತು.
ರಕ್ಷಣಾ ಸಿಬ್ಬಂದಿ ನೀಡಿದ ಸೂಚನೆ ಮಗುವಿಗೆ ಅರ್ಥವಾಗದೇ ಇದ್ದಿದ್ದರಿಂದ ಕಾರ್ಯಾಚರಣೆ ಕೊಂಚ ವಿಳಂಬವಾಗಿದೆ. ಕೊನೆಗೂ ಬಾಲಕ ಸಾವನ್ನು ಗೆದ್ದು ಬಂದಿದ್ದಾನೆ. ಮಗು ಆರೋಗ್ಯದಿಂದಿರುವುದನ್ನು ತಿಳಿದು ಹೆತ್ತವರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.