ನವದೆಹಲಿ: ಉಕ್ರೇನ್ ನಲ್ಲಿ ಸಿಲುಕಿರುವ ಕನ್ನಡಿಗರನ್ನು ಕರೆ ತರಲು ಕ್ರಮಕೈಗೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.
ನಾಗರಿಕರು ಇರುವ ಕಡೆ ದಾಳಿ ಮಾಡುವುದಿಲ್ಲ ಎಂದು ರಷ್ಯಾ ಸೇನೆ ಹೇಳಿರುವುದಾಗಿ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಮತ್ತು ಮುರಳೀಧರನ್ ಜಂಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಭಾರತೀಯ ವಿದ್ಯಾರ್ಥಿಗಳು ಬಂಕರ್ ಗಳಿಗೆ ತೆರಳಿದ್ದಾರೆ. ಮೆಟ್ರೋ ಸುರಂಗಗಳನ್ನು ಬಂಕರ್ ಗಳಾಗಿ ಬಳಕೆ ಮಾಡಲಾಗುತ್ತಿದ್ದು, ಇಂತಹ ಮೆಟ್ರೋ ಬಂಕರ್ ಗಳಲ್ಲಿ ವಿದ್ಯಾರ್ಥಿಗಳು ಸುರಕ್ಷಿತವಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ರಷ್ಯಾ ಅಧ್ಯಕ್ಷರೊಂದಿಗೆ ಪ್ರಧಾನಿ ಮೋದಿ ಮಾತನಾಡಿದ್ದಾರೆ. ಭಾರತೀಯರಿಗೆ ಹಾನಿ ಮಾಡದಂತೆ ಮನವಿ ಮಾಡಿದ್ದಾರೆ ಎಂದು ಜೋಶಿ ಮತ್ತು ಮುರಳಿಧರನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಉಕ್ರೇನ್ ನಲ್ಲಿರುವ ಭಾರತೀಯರ ರಕ್ಷಣೆ ನಮ್ಮದಾಗಿದೆ ಎಂದು ವಿದೇಶಾಂಗ ಸಚಿವ ರಾಜ್ಯ ಸಚಿವ ಮುರಳಿಧರನ್ ಹೇಳಿದ್ದಾರೆ. ಕರ್ನಾಟಕದ ವಿದ್ಯಾರ್ಥಿಗಳ ಬಗ್ಗೆ ಪ್ರಹ್ಲಾದ ಜೋಶಿ ಕಾಳಜಿ ವಹಿಸಿದ್ದಾರೆ. ವಿಮಾನ ಹಾರಾಟ ಸ್ಥಗಿತವಾದರೆ ಕಷ್ಟವಾಗುತ್ತದೆ. ರಸ್ತೆ ಮೂಲಕ ಜನರ ಸ್ಥಳಾಂತರ ಕಾರ್ಯ ನಡೆಯುತ್ತಿದೆ. ರೊಮೇನಿಯಾ ಮತ್ತು ಪೋಲೆಂಡ್ ಮೂಲಕ ಭಾರತೀಯರ ಸ್ಥಳಾಂತರ ಕಾರ್ಯ ಆರಂಭವಾಗಿದ್ದು, ಗಡಿಗಳಲ್ಲಿ ರಾಯಭಾರ ಕಚೇರಿ ಅಧಿಕಾರಿಗಳ ಮೊಕ್ಕಾಂ ಹೂಡಿದ್ದಾರೆ.
ವಿದ್ಯಾರ್ಥಿಗಳು ಯಾವುದೇ ಶುಲ್ಕವನ್ನು ಭರಿಸುವ ಅಗತ್ಯವಿಲ್ಲ. ಅವರೆಲ್ಲರನ್ನು ಉಚಿತವಾಗಿ ಸ್ಥಳಾಂತರ ಮಾಡುವಂತೆ ಪ್ರಧಾನಿ ಮೋದಿ ಸೂಚನೆ ನೀಡಿದ್ದಾರೆ. 20 ಸಾವಿರ ಜನರ ಪೈಕಿ 4 ಸಾವಿರ ವಿದ್ಯಾರ್ಥಿಗಳು ವಾಪಸ್ಸಾಗಲಿದ್ದಾರೆ. ರೊಮೇನಿಯಾ ಗಡಿಯಲ್ಲಿ ಸಾವಿರಕ್ಕೂ ಅಧಿಕ ಹಾಗೂ ಪೋಲೆಂಡ್ ಗಡಿಯಲ್ಲಿ 500ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. ಗಡಿಯಲ್ಲಿ ಇರುವವರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ರಸ್ತೆ ಮೂಲಕವೇ ಗಡಿ ದೇಶಗಳಿಗೆ ಸ್ಥಳಾಂತರಿಸಲಾಗುತ್ತದೆ ಎಂದು ವಿದೇಶಾಂಗ ಖಾತೆ ರಾಜ್ಯ ಸಚಿವ ಮುರಳೀಧರನ್ ಹೇಳಿದ್ದಾರೆ.