ಬೆಂಗಳೂರು: ಭ್ರಷ್ಟಾಚಾರ ದೂರು ಹಿನ್ನೆಲೆಯಲ್ಲಿ ಬಿಬಿಎಂಪಿ ಮುಖ್ಯ ಕಚೇರಿ ಸೇರಿದಂತೆ 27 ಪಾಲಿಕೆ ಕಚೇರಿಗಳ ಮೇಲೆ ಎಸಿಬಿ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.
ಬಿಡಿಎ ಮೇಲಿನ ಇತ್ತೀಚಿನ ದಾಳಿ ಬೆನ್ನಲ್ಲೇ ಇದೀಗ ಬಿಬಿಎಂಪಿ ಕಚೇರಿ ಮೇಲೂ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಸರ್ಕಾರಿ ಆಸ್ತಿ ಗೋಲ್ ಮಾಲ್, ಭ್ರಷ್ಟಾಚಾರ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದ ಎಸಿಬಿ ಇದೀಗ ದಿಢೀರ್ ದಾಳಿ ನಡೆಸಿದ್ದು, 200ಕ್ಕೂ ಹೆಚ್ಚು ಅಧಿಕಾರಿಗಳು ಬಿಬಿಎಂಪಿ ಉತ್ತರ, ದಕ್ಷಿಣ ವಿಭಾಗ ಕಚೇರಿ ಸೇರಿ 25 ಕಚೇರಿಗಳಲ್ಲಿ ಪರಿಶೀಲನೆ ನಡೆಸಿದ್ದಾರೆ.
ಬಿಬಿಎಂಪಿ ರಾಜಕಾಲುವೆ ವಿಭಾಗ, ಜಾಹೀರಾತು ವಿಭಾಗ, ಆರೋಗ್ಯ ವಿಭಾಗ ಸೇರಿದಂತೆ ಹಲವು ವಿಭಾಗ ಹಾಗೂ ಕಚೇರಿಗಳ ಮೇಲೆ ಸಾರ್ವಜನಿಕರ ಸೋಗಿನಲ್ಲಿ ಲಗ್ಗೆಯಿಟ್ಟ ಎಸಿಬಿ ಅಧಿಕಾರಿಗಳು ಮುಖ್ಯ ಆರೋಗ್ಯಾಧಿಕಾರಿ ಕಚೇರಿ ಮೇಲೂ ದಾಳಿ ನಡೆಸಿದ್ದಾರೆ. ದಾಖಲೆ ಪತ್ರಗಳ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.