ಬೆಂಗಳೂರು: ಕ್ಯಾನ್ಸರ್‌ನಿಂದ ಬಳಲುತ್ತಿರುವ ತನ್ನ ಮಗನಿಗೆ ಚಿಕಿತ್ಸೆ ನೀಡಲು ಕಾರು ಕದಿಯುತ್ತಿದ್ದ ಬಹ್ರೇನ್ ರಾಷ್ಟ್ರದ ಮಾಜಿ ಪೊಲೀಸ್ ಅಧಿಕಾರಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ವ್ಯಕ್ತಿಯನ್ನು ಕೇರಳ ಮೂಲದ 61 ವರ್ಷದ ನಜೀರ್ ಅಹ್ಮದ್ ಇಮ್ರಾನ್ ಅಥವಾ ಪಿಲಕಲ್ ನಜೀರ್ ಎಂದು ಗುರುತಿಸಲಾಗಿದೆ. ನಜೀರ್ ಭಾರತಕ್ಕೆ ಬರುವ ಮೊದಲು 9 ವರ್ಷಗಳ ಕಾಲ ಬಹ್ರೇನ್‌ನಲ್ಲಿ ಪೋಲೀಸ್ ಆಗಿ ಸೇವೆ ಸಲ್ಲಿಸಿದ್ದರು ಎನ್ನಲಾಗಿದೆ.
ಸುಮಾರು 14 ವರ್ಷಗಳ ಬಳಿಕ ಎರಡನೇ ಬಾರಿ ನಜೀರ್ ನನ್ನು ಬಂಧಿಸಲಾಗಿದೆ. ತನ್ನ ಮಗನಿಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿದ್ದರಿಂದ ಚಿಕಿತ್ಸೆಗಾಗಿ ಹಣ ಹೊಂದಿಸಬೇಕಾಗಿತ್ತು. ಹೀಗಾಗಿ ನಜೀರ್ ವೃತ್ತಿಪರ ಕಾರು ಕಳ್ಳನಾದ. ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದರೂ ಅಶೋಕನಗರ ಪೊಲೀಸರು 2008ರಲ್ಲಿ ನಜೀರ್‌ನನ್ನು ಬಂಧಿಸಿದ್ದರು.
ಆದರೆ, ಜೈಲಿನಿಂದ ಹೊರಬಂದ ನಂತರ ಅಪರಾಧ ಕೃತ್ಯಗಳನ್ನು ಮುಂದುವರಿಸಿದ್ದ. ಸೇವಾ ಕೇಂದ್ರದಿಂದ ಎಸ್‌ಯುವಿ ಕದ್ದ ಆರೋಪದ ಮೇಲೆ ಬ್ಯಾಟರಾಯನಪುರ ಠಾಣೆ ಪೊಲೀಸರು ಇತ್ತೀಚೆಗೆ ಬಂಧಿಸಿದ್ದಾರೆ. ನಜೀರ್‌ನಿಂದ ಹೈಗ್ರೌಂಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡು ಬೈಕ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ತನಿಖೆಯ ವೇಳೆ ಮಗನ ಚಿಕಿತ್ಸೆಗಾಗಿ ಈ ಕೃತ್ಯ ಎಸಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ವಾಹನಗಳನ್ನು ಕದ್ದು ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಾರಾಟ ಮಾಡುತ್ತಿದ್ದರು. ನಜೀರ್ ಬೆಂಗಳೂರು ನಗರ ಮತ್ತು ಕೇರಳದ ವಿವಿಧೆಡೆ ವಾಹನ ಕದಿಯುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.