ರೇವಾ: ಭಾರತದಲ್ಲಿ ನಡೆಯುವ ಕೆಲವು ವಿವಾಹ ಸಮಾರಂಭಗಳು ಯಾವುದೇ ಸಿನಿಮಾದ ಕಥೆಗಿಂತ ಭಿನ್ನವಿಲ್ಲ. ಏಕೆಂದರೆ ಇಲ್ಲಿ ನಾಟಕ, ಸಸ್ಪೆನ್ಸ್ ಮತ್ತು ದುರಂತದಂತಹ ಸನ್ನಿವೇಶಗಳು ಸಂಭವಿಸುತ್ತಿರುತ್ತದೆ.
ಇನ್ನೇನು ಹಸೆಮಣೆ ಏರಬೇಕು ಎಂದಾಗ ಏನಾದರೂ ಡ್ರಾಮಾ ಸಂಭವಿಸಿ ಮದುವೆ ಮೊಟಕುಗೊಳ್ಳುತ್ತದೆ. ಕೆಲವೆಡೆ ವಧುಗಳು ಮದುವೆಗೆ ನಿರಾಕರಿಸುವಂತಹ ಘಟನೆಗಳು ಕೂಡ ನಡೆಯುತ್ತದೆ. ಇದೇ ರೀತಿ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ಕೂಡ ವಿಲಕ್ಷಣ ಘಟನೆ ನಡೆದಿದೆ. ಮದುವೆ ಸಂಪ್ರದಾಯದ ಆಚರಣೆಗಳು ನಡೆಯುತ್ತಿದ್ದಂತೆ, ವರ ಮಾನಸಿಕ ಅಸ್ವಸ್ಥ ಎಂಬುದು ಗೊತ್ತಾಗಿ ವಧು ಮದುವೆಯಾಗಲು ನಿರಾಕರಿಸಿದ್ದಾಳೆ. ಅಷ್ಟೇ ಅಲ್ಲ, ವಧುವಿನ ಕಡೆಯವರು ವರ ಮತ್ತು ಆತನ ಕಡೆಯಿಂದ ಬಂದಿರುವ ಬಾರಾತ್ ಸದಸ್ಯರನ್ನು ಒತ್ತೆಯಾಳಾಗಿಟ್ಟುಕೊಂಡು ಥಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ಅದರಲ್ಲಿ ವರನ ಕೂದಲನ್ನು ಹಿಡಿದು ಎಳೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ವಧುವಿನ ಮನೆಯವರು ಅವರನ್ನು ಒತ್ತೆಯಾಳಾಗಿಟ್ಟುಕೊಂಡು ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಮಾಣಿಕ್ವಾರ್ ಗ್ರಾಮದಿಂದ ವನ್ಪಧಾರ್ ಗ್ರಾಮಕ್ಕೆ ಮೆರವಣಿಗೆಯೊಂದಿಗೆ ವರನ ಬಾರಾತ್ ಆಗಮಿಸಿತ್ತು. ವೈವಾಹಿಕ ಆಚರಣೆಗಳ ನಡುವೆ, ಬಾರಾತಿಗಳ ವರ್ತನೆಯ ಬಗ್ಗೆ ವಿವಾದವುಂಟಾಯಿತು. ಹೀಗಾಗಿ ವಧು ಮದುವೆಯಾಗಲು ನಿರಾಕರಿಸಿದ್ದಾಳೆ. ಮದುವೆ ಆಚರಣೆ ವೇಳೆ ವಧುವಿನ ಸಂಬಂಧಿಕ ಮಹಿಳೆಯರ ಜೊತೆ ವರನ ಸಂಬಂಧಿಕರು ಅನುಚಿತವಾಗಿ ವರ್ತಿಸಿದ್ದಾರೆ ಎಂದು ವಧುವಿನ ಸಂಬಂಧಿಕರು ಕೋಪಗೊಂಡಿದ್ದಾರೆ. ವಿವಾದ ಉಲ್ಬಣಗೊಳ್ಳುತ್ತಿದ್ದಂತೆ ಹೊಡಿಬಡಿ ನಡೆದಿದೆ. ವರ ಮತ್ತು ಆತನ ಸಹಚರರಿಗೆ ಥಳಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.