ಬಿಹಾರದ ನಿತೀಶ್ ಕುಮಾರ್ ನೇತೃತ್ವದ ಆಡಳಿತರೂಢ ಸರ್ಕಾರಕ್ಕೆ, ಅವರ ಪಕ್ಷದ ನಾಯಕನ ಹುಚ್ಚಾಟದಿಂದ ತೀವ್ರ ಮುಜುಗರ ಉಂಟಾಗಿದೆ. ಜೆಡಿಯು ನಾಯಕನೊಬ್ಬ ಇಡೀ ಸರ್ಕಾರ ತಲೆ ತಗ್ಗಿಸುವಂತ ಕೆಲಸ ಮಾಡಿದ್ದಾರೆ. ಕಂಠಪೂರ್ತಿ ಕುಡಿದ ನಶೆಯಲ್ಲಿದ್ದ ಜೆಡಿಯು ನಾಯಕ ಜಯಪ್ರಕಾಶ್ ಪ್ರಸಾದ್ ಅಲಿಯಾಸ್ ಕಾಲು, ಸಾರ್ವಜನಿಕ ಸ್ಥಳಗಳಲ್ಲಿ ಬೆತ್ತಲೆಯಾಗಿ ಅಲೆದಿದ್ದಾರೆ. ಈ ಘಟನೆ ಬಿಹಾರದ ನಳಂದಾ ಜಿಲ್ಲೆಯ ಜಗದೀಶ್ಪುರ ಹಳ್ಳಿಯಲ್ಲಿ ನಡೆದಿದ್ದು, ಸದ್ಯ ಜಯಪ್ರಕಾಶ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಜಯಪ್ರಕಾಶ್, ಇಸ್ಲಾಂಪುರ ವಿಧಾನಸಭಾ ಕ್ಷೇತ್ರದ ಜೆಡಿಯು ಯುವ ಘಟಕದ ಮುಖ್ಯಸ್ಥ. ಈತ ಹಲವು ವರ್ಷಗಳಿಂದ ಜೆಡಿಯುನ ಭಾಗವಾಗಿದ್ದ, ಆತನ ಈ ದುರ್ನಡತೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ವಿ, ಎಂದು ಪಕ್ಷದ ಇಸ್ಲಾಂಪುರ ಬ್ಲಾಕ್ ಅಧ್ಯಕ್ಷ ತನ್ವೀರ್ ಆಲಂ ತಿಳಿಸಿದ್ದಾರೆ.
ಜಯಪ್ರಕಾಶ್ ಕಂಠಪೂರ್ತಿ ಕುಡಿದು, ತಾನೇನು ಮಾಡುತ್ತಿದ್ದೇನೆ ಎಂಬುದನ್ನು ತಿಳಿಯದ ಸ್ಥಿತಿಗೆ ತಲುಪಿದ್ದ. ಆತ ಮನೆಯ ಬಳಿ ತನ್ನ ಬಟ್ಟೆಯನ್ನೆಲ್ಲ ಕಳಚಿ, ಬೆತ್ತಲೆಯಾಗಿ ರೋಡ್ ಮೇಲೆ ಓಡಾಡುವುದನ್ನು ವಿಡಿಯೋದಲ್ಲಿ ನೋಡಬಹುದು. ಆತನ ಹುಚ್ವಾಟ ನೋಡಿ ಮನೆಯೊಳಗೇ ಇರು ಎಂದು ಆತನ ಸೋದರ ಹೇಳಿದರೂ ಒಪ್ಪದ ಜಯಪ್ರಕಾಶ್, ಆತನನ್ನೆ ಬೈದು ಓಡಿಸಿದ್ದಾನೆ. ಹಲವರು ಕಾಲುವಿನ ಈ ಹುಚ್ಚಾಟದ ವಿಡಿಯೋ ಮಾಡಿದ್ದಲ್ಲದೆ, ಪೊಲೀಸರಿಗು ಮಾಹಿತಿ ನೀಡಿದ್ದಾರೆ.
ಘಟನೆ ಬಗ್ಗೆ ಇಸ್ಲಾಂಪುರ ಠಾಣೆ ಮುಖ್ಯ ಅಧಿಕಾರಿ ಚಂದ್ರಶೇಖರ್ ಸಿಂಗ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ವ್ಯಕ್ತಿಯೊಬ್ಬ ಮದ್ಯಪಾನ ಮಾಡಿ, ಜಗದೀಶ್ಪುರ ಗ್ರಾಮದಲ್ಲಿ ಗಲಾಟೆ ಮಾಡುತ್ತಿದ್ದಾನೆ ಎಂಬ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಅಲ್ಲಿಗೆ ಹೋದೆವು. ಅಲ್ಲಿ ಹೋಗಿ ನೋಡಿದರೆ ಆತ ತನ್ನ ಮೇಲೆ ನಿಯಂತ್ರಣ ಕಳೆದುಕೊಳ್ಳುವಷ್ಟು ಕುಡಿದಿದ್ದ. ಈಗ ಅವನಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಸದ್ಯ ಲಿಕ್ಕರ್ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿ, ಆತನನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.