ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇಂದು ಉಕ್ರೇನ್ ಮೇಲೆ ಯುದ್ಧ ಘೋಷಣೆ ಮಾಡಿದ ಬಳಿಕ ಉಕ್ರೇನ್ನಲ್ಲಿ ಪರಿಸ್ಥಿತಿ ಸಂಪೂರ್ಣ ಬಿಗಡಾಯಿಸಿದೆ. ಈ ವಿಚಾರವಾಗಿ ಮಾತನಾಡಿರುವ ಉಕ್ರೇನ್ನಲ್ಲಿರುವ ಭಾರತೀಯ ವಿದ್ಯಾರ್ಥಿ ಶಿವ್, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ದೂರದರ್ಶನದಲ್ಲಿ ಭಾಷಣ ಮಾಡಿ ಯುದ್ಧ ಘೋಷಣೆ ಮಾಡುವವರೆಗೂ ಉಕ್ರೇನ್ನಲ್ಲಿ ಪರಿಸ್ಥಿತಿ ಸಾಮಾನ್ಯವಾಗಿತ್ತು ಎಂದು ವಿವರಿಸಿದ್ದಾರೆ.
ಈ ಸುದ್ದಿ ತಿಳಿಯುತ್ತಿದ್ದಂತೆಯೇ ಶಿವ್ ತಮ್ಮ ಬ್ಯಾಗ್ನ್ನು ಪ್ಯಾಕ್ ಮಾಡಿ ತಾನಿದ್ದ ನಗರವನ್ನು ತೊರೆದು ರಾಜಧಾನಿ ಕೈವ್ಗೆ ಹೊರಟರು. ಕೈವ್ನಲ್ಲಿ ಏರ್ ಇಂಡಿಯಾ ವಿಮಾನವನ್ನು ಏರಿ ಸುರಕ್ಷಿತವಾಗಿ ಭಾರತಕ್ಕೆ ಮರಳಲು ಯೋಜಿಸಿದ್ದರು.
ಆದರೆ ಕೈವ್ಗೆ ಬರುತ್ತಿದ್ದಂತೆಯೇ ವಿಮಾನ ನಿಲ್ದಾಣಗಳನ್ನು ಬಂದ್ ಮಾಡಲಾಗಿದೆ ಎಂಬ ವಿಚಾರ ಶಿವ್ಗೆ ತಿಳಿದಿದೆ. ಈಗಂತೂ ಸಾರ್ವಜನಿಕ ಸಾರಿಗೆಗಳನ್ನೂ ಬಂದ್ ಮಾಡಲಾಗಿದ್ದು ಶಿವ್ಗೆ ವಿಶ್ವವಿದ್ಯಾಲಯಕ್ಕೆ ಮರಳಲೂ ಆಗುತ್ತಿಲ್ಲ. ಇವರ ಜೊತೆಯಲ್ಲಿ ಇನ್ನೂ 50 ಮಂದಿ ವಿದ್ಯಾರ್ಥಿಗಳಿದ್ದು ಎಲ್ಲರೂ ಕೈವ್ನ ರೈಲ್ವೆ ನಿಲ್ದಾಣದಲ್ಲಿ ನಿಂತಿದ್ದಾರೆ.
ಈ ವಿಚಾರವಾಗಿ ಮಾತನಾಡಿದ ಶಿವ್, ನನಗೆ ಏನನ್ನೂ ಅಂದಾಜಿಸಲು ಸಾಧ್ಯವಾಗುತ್ತಿಲ್ಲ. ನಮಗೆ ಭಾರತಕ್ಕೆ ಮರಳಲು ಒಂದು ವಿಮಾನ ಸಿಕ್ಕರೆ ಸಾಕು ಎಂದಿದ್ದಾರೆ.
ಶಿವ್ ಭಾರತದಲ್ಲಿರುವ ತಮ್ಮ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದಾರೆ ಮತ್ತು ಕೆಲವು ವಿದ್ಯಾರ್ಥಿಗಳು ಸಹಾಯಕ್ಕಾಗಿ ಉಕ್ರೇನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿದ್ದಾರೆ ಎಂದು ಹೇಳಿದರು. ಆದರೆ, ಅವರ ವಿಶ್ವವಿದ್ಯಾಲಯವು ಇನ್ನೂ ಅಂತರರಾಷ್ಟ್ರೀಯ ವಿದ್ಯಾರ್ಥಿಗಳೊಂದಿಗೆ ಸಂಪರ್ಕಕ್ಕೆ ಬಂದಿಲ್ಲ.