ರಾಜ್ಯದಲ್ಲಿ ಹಿಜಾಬ್ ವಿವಾದ ಹೈಕೋರ್ಟ್ ಮೆಟ್ಟಿಲೇರಿದ್ದು, ಅಂತಿಮ ತೀರ್ಪು ಹೊರಬೀಳುವವರೆಗೂ ವಿದ್ಯಾರ್ಥಿಗಳು ಹಿಜಾಬ್, ಕೇಸರಿ ಶಾಲು, ಸ್ಕಾರ್ಫ್ ಸೇರಿದಂತೆ ಯಾವುದೇ ಧಾರ್ಮಿಕ ಗುರುತುಗಳನ್ನು ಧರಿಸಿ ತರಗತಿಗೆ ಹಾಜರಾಗದಂತೆ ಮಧ್ಯಂತರ ಆದೇಶದಲ್ಲಿ ಸೂಚಿಸಲಾಗಿತ್ತು.
ಯಾವ್ಯಾವ ಪದವಿಪೂರ್ವ ಮತ್ತು ಪದವಿ ಕಾಲೇಜುಗಳಲ್ಲಿ ಸಮವಸ್ತ್ರ ಜಾರಿಯಲ್ಲಿದೆಯೋ ಅಲ್ಲಿ ಮಾತ್ರ ಈ ಮಧ್ಯಂತರ ಆದೇಶ ಅನ್ವಯವಾಗುತ್ತದೆ ಎಂದು ಹೈಕೋರ್ಟ್ ಪೂರ್ಣಪೀಠ ಹೇಳಿತ್ತಾದರೂ ಕೆಲವೊಂದು ಕಾಲೇಜುಗಳಲ್ಲಿ ಸಮವಸ್ತ್ರ ನಿಯಮ ಜಾರಿಯಲ್ಲಿರದಿದ್ದರೂ ಹಿಜಾಬ್ ಧರಿಸಿಕೊಂಡು ಬಂದ ವಿದ್ಯಾರ್ಥಿನಿಯರಿಗೆ ತರಗತಿಗೆ ಹಾಜರಾಗಲು ಅವಕಾಶ ನೀಡುತ್ತಿಲ್ಲ ಎಂಬ ಕೂಗು ಕೇಳಿಬಂದಿತ್ತು.
ಈ ಹಿನ್ನೆಲೆಯಲ್ಲಿ ಉಡುಪಿ ಸರ್ಕಾರಿ ಪಿಯು ಕಾಲೇಜು ವಿದ್ಯಾರ್ಥಿನಿಯರ ಪರ ವಕೀಲ ಮೊಹಮ್ಮದ್ ತಾಹೀರ್, ಬುಧವಾರದಂದು ನಡೆದ ವಿಚಾರಣೆ ವೇಳೆ ಮಧ್ಯಂತರ ಆದೇಶ ಕುರಿತು ಸ್ಪಷ್ಟನೆ ಕೋರಿದ್ದರು. ಆಗ ಸಿಜೆ ಋತುರಾಜ್ ಅವಸ್ಥಿ ನೇತೃತ್ವದ ಪೂರ್ಣಪೀಠ, ಯಾವ ಕಾಲೇಜುಗಳಲ್ಲಿ ಸಮವಸ್ತ್ರ ನಿಯಮ ಜಾರಿಯಲ್ಲಿದೆಯೋ ಅಲ್ಲಿ ಮಾತ್ರ ಮಧ್ಯಂತರ ಆದೇಶ ಅನ್ವಯವಾಗಲಿದೆ ಎಂದು ಮತ್ತೊಮ್ಮೆ ಸ್ಪಷ್ಟನೆ ನೀಡಿದೆ.