ರಾಜ್ಯದಲ್ಲಿ ಭುಗಿಲೆದ್ದಿರುವ ಹಿಜಾಬ್ ವಿವಾದದ ವಿಚಾರದಲ್ಲಿ ಬಿಜೆಪಿ ಸರ್ಕಾರವು ಎಚ್ಚರಿಕೆಯ ಹೆಜ್ಜೆಗಳನ್ನೇ ಇಡುತ್ತಿದೆ. ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸಿ ಬಂದವರಿಗೆ ತರಗತಿಗೆ ಕುಳಿತುಕೊಳ್ಳಲು ಅವಕಾಶ ನೀಡದ ಕ್ರಮವು ದೇಶದಲ್ಲಿ ಮಾತ್ರವಲ್ಲದೇ ವಿದೇಶದಲ್ಲಿ ಕೂಡ ಸದ್ದು ಮಾಡುತ್ತಿದೆ. ಈ ವಿವಾದವು ಪ್ರಧಾನಿ ಮೋದಿ ಮೇಲೆಯೂ ಜಾಗತಿಕ ಮಟ್ಟದಲ್ಲಿ ಪರಿಣಾಮ ಬೀರಬಹುದು ಎಂದು ಅಂದಾಜಿಸಲಾಗಿದೆ.
ಈ ವಿಚಾರವಾಗಿ ಆತಂಕ ಹೊರಹಾಕಿರುವ ಬಿಜೆಪಿಯ ಹಿರಿಯ ನಾಯಕರೊಬ್ಬರು ನಮಗೆ ಚುನಾವಣೆಯಲ್ಲಿ ಹಿನ್ನಡೆ ಉಂಟಾಗಬಹುದು ಎಂಬ ಆತಂಕವಿಲ್ಲ. ಆದರೆ ಪೌರತ್ವ ತಿದ್ದುಪಡೆ ಕಾಯ್ದೆಯ ಸಂದರ್ಭದಲ್ಲಿ ಸ್ಫೋಟಗೊಂಡ ಪ್ರತಿಭಟನೆಗಳಂತೆ ಈಗಲೂ ಆಗಬಹುದು ಎಂಬ ಆತಂಕವಿದೆ ಎಂದಿದ್ದಾರೆ. ಇದು ಜಾಗತಿಕವಾಗಿ ಪ್ರಧಾನಿಯವರ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಿದ್ದಾರೆ.
ರಾಜ್ಯದ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿಯವರಿಗಂತೂ ಈ ಹಿಜಾಬ್ ವಿವಾದವು ಅಗ್ನಿ ಪರೀಕ್ಷೆ ಎಂಬಂತಾಗಿದೆ. ಹಿಜಾಬ್ ನಿಷೇಧಗೊಳಿಸುವಂತೆ ಹೈಕೋರ್ಟ್ನಲ್ಲಿ ವಾದಿಸುತ್ತಿರುವ ರಾಜ್ಯ ಸರ್ಕಾರದ ನಡೆಗೆ ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ಅಮಿತ್ ಶಾ ಕೂಡ ಸಾಥ್ ನೀಡಿದ್ದಾರೆ ಎನ್ನಲಾಗಿದೆ.
ದೇಶವು ಸಂವಿಧಾನದ ಆಧಾರದ ಮೇಲೆಯೇ ಕೆಲಸ ಮಾಡುತ್ತಿದೆಯೇ ಎಂಬುದು ಮುಖ್ಯವಾಗಿದೆ. ಅಲ್ಲದೇ ಎಲ್ಲಾ ಧರ್ಮಕ್ಕೆ ಸೇರಿದ ವಿದ್ಯಾರ್ಥಿಗಳು ಸಮವಸ್ತ್ರಗಳನ್ನು ಒಪ್ಪಿಕೊಳ್ಳಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ ಎಂದು ಅಮಿತ್ ಶಾ ಹೇಳಿದ್ದಾರೆ.