ತಮಿಳುನಾಡು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ವೆಲ್ಲೂರ್ನಿಂದ ಡಿಎಂಕೆ ಪಕ್ಷದ ತೃತೀಯ ಲಿಂಗಿ ಅಭ್ಯರ್ಥಿಯು ಭರ್ಜರಿ ಗೆಲುವನ್ನು ಸಾಧಿಸಿದ್ದಾರೆ.
ವೆಲ್ಲೂರು ಮುನ್ಸಿಪಲ್ ಕಾರ್ಪೋರೇಷನ್ನ ವಾರ್ಡ್ ಸಂಖ್ಯೆ 37ರಲ್ಲಿ 49 ವರ್ಷದ ಗಂಗಾ ನಾಯಕ್ರನ್ನು ವಿಜೇತ ಅಭ್ಯರ್ಥಿ ಎಂದು ಘೋಷಿಸಲಾಗಿದೆ.
ವೆಲ್ಲೂರು ಮೂಲದ ಸಾಮಾಜಿಕ ಕಾರ್ಯಕರ್ತೆ ಹಾಗೂ ದಕ್ಷಿಣ ಭಾರತದ ಟ್ರಾನ್ಸ್ಜೆಂಡರ್ ಅಸೋಸಿಯೇಷನ್ನ ಕಾರ್ಯದರ್ಶಿಯಾಗಿ ಗಂಗಾ ನಾಯಕ್ ಸೇವೆ ಸಲ್ಲಿಸುತ್ತಿದ್ದಾರೆ. ಪಾಲಿಕೆಯ ಕೌನ್ಸಿಲರ್ ಹುದ್ದೆಗೆ ಡಿಎಂಕೆ ಅಭ್ಯರ್ಥಿ 15 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
21 ಮುನ್ಸಿಪಲ್ ಕಾರ್ಪೋರೇಷನ್, 138 ಪುರಸಭೆ ಹಾಗೂ 490 ಪಟ್ಟಣ ಪಂಚಾಯತ್ಗಳಲ್ಲಿ 12, 838 ಸ್ಥಾನಗಳನ್ನು ಭರ್ತಿ ಮಾಡಲು ಬರೋಬ್ಬರಿ 11 ವರ್ಷಗಳ ಬಳಿಕ ತಮಿಳುನಾಡಿನಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗಳು ನಡೆದಿದೆ.
ಈ ಬಾರಿ ಡಿಎಂಕೆ ಮಾತ್ರವಲ್ಲದೇ ಬಿಜೆಪಿ ಹಾಗೂ ಎಐಡಿಎಂಕೆ ಪಕ್ಷಗಳೂ ಸಹ ತೃತೀಯ ಲಿಂಗಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಈ ವರ್ಷ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ 15 ತೃತೀಯ ಲಿಂಗಿ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಇವರಲ್ಲಿ ಅನೇಕರು ಸ್ವತಂತ್ರ ಅಭ್ಯರ್ಥಿಗಳಾಗಿದ್ದಾರೆ .
ಎಐಎಡಿಎಂಕೆಯ ತೃತೀಯಲಿಂಗಿ ಅಭ್ಯರ್ಥಿ ಜಯದೇವಿ ಅವರು ಚೆನ್ನೈ ಕಾರ್ಪೊರೇಷನ್ನ ತೆನಾಂಪೇಟ್ ವಲಯದ ವಾರ್ಡ್ 112 ರಿಂದ ಸ್ಪರ್ಧಿಸಿದ್ದಾರೆ. ಅವರು ಕಳೆದ 15 ವರ್ಷಗಳಿಂದ ಪಕ್ಷದೊಂದಿಗೆ ಸಂಪರ್ಕ ಹೊಂದಿದ್ದಾರೆ. ಬಿಜೆಪಿಯ ತೃತೀಯ ಅಭ್ಯರ್ಥಿ ರಾಜಮ್ಮ ಅವರು ಚೆನ್ನೈ ಕಾರ್ಪೊರೇಶನ್ನ ತಿರುವಿಕಾ ನಗರ ವಲಯದ 76 ನೇ ವಾರ್ಡ್ನಿಂದ ಸ್ಪರ್ಧಿಸಿದ್ದಾರೆ.