ಚುನಾವಣೆ ಅಂದಮೇಲೆ ಮತವನ್ನು ಗಿಟ್ಟಿಸಿಕೊಳ್ಳಲು ಅಭ್ಯರ್ಥಿಗಳು ಹುಡುಕುವ ವಾಮಮಾರ್ಗದ ಬಗ್ಗೆ ಹೆಚ್ಚೇನು ಹೇಳಬೇಕಾಗಿಲ್ಲ. ಇದೇ ರೀತಿ ಘಟನೆಯೊಂದು ತಮಿಳುನಾಡಿನ ಅಂಬೂರಿನ 36ನೇ ವಾರ್ಡಿನಲ್ಲಿ ಸಂಭವಿಸಿದೆ. ಕೌನ್ಸಿಲರ್ ಸ್ಥಾನಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮನಿಮೇಗಲೈ ದುರೈಂಪಾಡಿ ಎಂಬವರು ಮತದಾರರಿಗೆ ಆಮಿಷವೊಡ್ಡುವ ನೆಪದಲ್ಲಿ ಮೋಸ ಮಾಡಿದ್ದಾರೆ.
ಸ್ಥಳೀಯ ಸಂಸ್ಥೆಗಳ ಚುನಾವಣೆಯ ನಿಮಿತ್ತ ಪ್ರಚಾರ ಕಾರ್ಯ ಕೈಗೊಂಡಿದ್ದ ಮನಿಮೇಗಲೈ ತೆಂಗಿನಕಾಯಿ ಚಿಹ್ನೆಗೆ ಮತ ಹಾಕುವಂತೆ ಮತದಾರರಲ್ಲಿ ಮನವಿ ಮಾಡಿದ್ದರು. ಅಲ್ಲದೇ ತನ್ನ ಪತಿಯ ಜೊತೆ ಸೇರಿ ಮನಿಮೇಗಲೈ ಮತದಾರರಿಗೆ ಉಡುಗೊರೆಯನ್ನೂ ನೀಡಿದ್ದರು.
ಮಣಿಮೇಗಲೈ ದುರೈಪಾಂಡಿ ಪ್ರತಿ ಕುಟುಂಬಕ್ಕೆ ಚಿಕ್ಕ ಪೆಟ್ಟಿಗೆಯೊಳಗೆ ಚಿನ್ನದ ನಾಣ್ಯವನ್ನು ನೀಡಿದ್ದಾರೆ ಮತ್ತು ಎಣಿಕೆ ದಿನಾಂಕದವರೆಗೆ ಅದನ್ನು ತೆರೆಯದಂತೆ ವಿನಂತಿಸಿದ್ದರು ಎನ್ನಲಾಗಿದೆ.
ಮತದಾನಕ್ಕೂ ಮೂರು ದಿನಗಳು ಮೊದಲಾಗಿ ನಾಣ್ಯವನ್ನು ಬಳಸಲು ಪ್ರಯತ್ನಿಸಿದರೆ, ರಾಜ್ಯ ಚುನಾವಣಾ ಆಯೋಗದ ಗಮನಕ್ಕೆ ಬರುತ್ತದೆ ಮತ್ತು ಅವರು ಅದನ್ನು ವಶಪಡಿಸಿಕೊಳ್ಳುತ್ತಾರೆ ಎಂದು ಅವರು ಮತದಾರರಿಗೆ ಎಚ್ಚರಿಕೆ ನೀಡಿದ್ದರು.
ಆದರೆ, ಭಾನುವಾರ ಕೆಲವರು ಗಿರವಿ ಇಡಲು ಯತ್ನಿಸಿದ್ದು, ನಾಣ್ಯಗಳು ಚಿನ್ನವಲ್ಲ ತಾಮ್ರವಾಗಿರುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಮಣಿಮೇಗಲೈ ದುರೈಪಾಂಡಿ ಚಿನ್ನದ ತೆಳುವಾದ ಪದರವನ್ನು ಲೇಪಿತ ತಾಮ್ರದ ನಾಣ್ಯಗಳನ್ನು ನೀಡಿದ್ದರು ಎಂದು ಗಿರವಿ ಅಂಗಡಿಯವರಿಗೆ ಮೊದಲೇ ತಿಳಿದಿತ್ತು ಎನ್ನಲಾಗಿದೆ.
ಮಣಿಮೇಗಲೈ ದುರೈಪಾಂಡಿ ತಮ್ಮ ಮನೆಯನ್ನು 20 ಲಕ್ಷ ರೂ.ಗೆ ಅಡವಿಟ್ಟು ನಮಗಾಗಿ ಚಿನ್ನದ ನಾಣ್ಯ ಖರೀದಿಸಿದ್ದಾಗಿ ಹೇಳಿಕೊಂಡಿದ್ದರು. ಅಲ್ಲದೇ ಈ ನಾಣ್ಯವಿರುವ ಪೆಟ್ಟಿಗೆಯನ್ನು ನೀಡಿ ಮತ ಹಾಕುವಂತೆ ಮನವಿ ಮಾಡಿದ್ದರು ಎಂದು ಈ ಭಾಗದ ಮಹಿಳೆಯೊಬ್ಬರು ಹೇಳಿದ್ದಾರೆ.