ಬೆಂಗಳೂರು: ವಿವಾದಾತ್ಮಕ ಹೇಳಿಕೆ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಛೀಮಾರಿ ಬೆನ್ನಲ್ಲೇ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಇದೀಗ ರಾಜ್ಯಪಾಲರನ್ನು ಭೇಟಿಯಾಗಿದ್ದು, ರಾಜ್ಯ ರಾಜಕೀಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
ಕೆಂಪು ಕೋಟೆ ಮೇಲೆ ಕೇಸರಿ ಧ್ವಜ ಹಾರಿಸುವುದಾಗಿ ಹೇಳಿದ್ದ ಸಚಿವ ಈಶ್ವರಪ್ಪ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆ. ಸಚಿವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ವಿಧಾನಮಂಡಲದ ಒಳಗು ಹಾಗೂ ಹೊರಗು ಪ್ರತಿಭಟನೆ ನಡೆಸಿದ್ದು, ಈ ನಡುವೆ ಸಚಿವ ಈಶ್ವರಪ್ಪ ಅವರಿಗೆ ಕರೆ ಮಾಡಿದ್ದ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ, ಇಂತಹ ಹೇಳಿಕೆ ಒಪ್ಪಲು ಸಾಧ್ಯವಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದರು. ಈ ಬೆಳವಣಿಗೆಗಳ ಮಧ್ಯೆ ಇದೀಗ ಸಚಿವ ಈಶ್ವರಪ್ಪ ರಾಜ್ಯಪಾಲರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.
ರಾಜ್ಯಪಾಲರ ಭೇಟಿ ಬಳಿಕ ಮಾತನಾಡಿದ ಸಚಿವ ಈಶ್ವರಪ್ಪ, ರಾಜ್ಯಪಾಲರು ನನ್ನನ್ನು ಭೇಟಿಗೆ ಕರೆದಿರಲಿಲ್ಲ. ನಾನಾಗಿಯೇ ಭೇಟಿ ಮಾಡಿದ್ದೇನೆ. ಕುವೆಂಪು ವಿವಿ ಸಮಸ್ಯೆ ವಿಚಾರವಾಗಿ ರಾಜ್ಯಪಾಲರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾಗಿ ತಿಳಿಸಿದರು.