ಬೆಂಗಳೂರು: ವಿಧಾನಸಭೆಯಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ ಇಂದೂ ಕೂಡ ಕಾಂಗ್ರೆಸ್ ಸದಸ್ಯರು ಸಚಿವ ಕೆ.ಎಸ್. ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ಇದೇ ವೇಳೆ ಬಜರಂಗದಳ ಕಾರ್ಯಕರ್ತನ ಹತ್ಯೆ ಪ್ರಕರಣ ಕೂಡ ಸದನದಲ್ಲಿ ಪ್ರತಿಧ್ವನಿಸಿದೆ.
ವಿಧಾನಸಭೆಯಲ್ಲಿ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ ಕಾಂಗ್ರೆಸ್ ನಾಯಕ ಧರಣಿ, ಪ್ರತಿಭಟನೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಪಕ್ಷ ನಾಯಕರ ಗದ್ದಲದಿಂದಾಗಿಯೇ ರಾಜ್ಯಾದ್ಯಂತ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಬಜರಂಗದಳದ ಕಾರ್ಯಕರ್ತ ಯುವಕನ ಹತ್ಯೆಯಾಗಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ಶಿವಮೊಗ್ಗದಲ್ಲಿ ನಡೆದ ಯುವಕ ಹರ್ಷನ ಹತ್ಯೆಗೆ ಕಾಂಗ್ರೆಸ್ ಗದ್ದಲವೇ ಕಾರಣವಾಗಿದೆ. ಕಾಂಗ್ರೆಸ್ ನಾಯಕರು ಗಲಭೆ, ಗದ್ದಲ ನಡೆಸಿ ಸದನದಲ್ಲಿಯೂ ಚರ್ಚೆಗೆ ಅವಕಾಶ ಕೊಡದೇ ನಡೆದುಕೊಳ್ಳುತ್ತಿರುವ ವರ್ತನೆಯಿಂದಾಗಿ ಪ್ರಚೋದನೆ ಪಡೆದುಕೊಂಡು ಶಿವಮೊಗ್ಗದಲ್ಲಿ ಷಡ್ಯಂತ್ರದಿಂದ ಹರ್ಷನ ಕೊಲೆಯಾಗಿದೆ. ಕಾಂಗ್ರೆಸ್ ನ ಇಂತಹ ವರ್ತನೆ ಇತಿಹಾಸದಲ್ಲಿಯೇ ಕಪ್ಪುಚುಕ್ಕೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಪ್ರಕ್ಷುಬ್ಧ ವಾತಾವರಣ ಸರಿ ಮಾಡುವುದು ಆಡಳಿತ ಹಾಗೂ ವಿಪಕ್ಷ ನಮ್ಮೆಲ್ಲರ ಜವಾಬ್ದಾರಿ. ಹಿಜಾಬ್ ವಿಚಾರ ಹೈಕೋರ್ಟ್ ನಲ್ಲಿದೆ. ಹೈಕೋರ್ಟ್ ಮಧ್ಯಂತರ ಆದೇಶ ಪಾಲಿಸುವುದು ನಮ್ಮ ಕರ್ತವ್ಯ. ಈ ಬಗ್ಗೆ ಕಾಂಗ್ರೆಸ್ ಸದಸ್ಯರು, ರಾಜ್ಯದ ಜನತೆ ಅರಿತುಕೊಳ್ಳಬೇಕು. ಸದನದಲ್ಲಿ ಚರ್ಚಿಸಲು ಸಾಕಷ್ಟು ವಿಷಯಗಳಿವೆ ಅದೆಲ್ಲವನ್ನು ಬಿಟ್ಟು ಕಾಂಗ್ರೆಸ್ ಇಂತಹ ಧರಣಿ ನಡೆಸುತ್ತಿರುವುದು ಸರಿಯಲ್ಲ. ಕಾಂಗ್ರೆಸ್ ನಾಯಕರು ಜವಾಬ್ದಾರಿ ಅರಿತು ಧರಣಿ ಕೈಬಿಟ್ಟು ಚರ್ಚೆಗೆ ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದರು.