![](https://kannadadunia.com/wp-content/uploads/2022/02/AAU7end.jpg)
ಒಂದು ಕಾಲದಲ್ಲಿ ಮಕ್ಕಳನ್ನು ಹೆರುವುದನ್ನ ಕಡಿಮೆ ಮಾಡಲು ಹಲವು ನಿಯಮಗಳನ್ನು ತಂದಿದ್ದ ಚೀನಾ ಈಗ ಅದರ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಚೀನಾ ಇತಿಹಾಸದಲ್ಲೇ ಮೊದಲ ಬಾರಿಗೆ ಶಿಶುಗಳ ಜನನ ಪ್ರಮಾಣದಲ್ಲಿ ದಾಖಲೆಯ ಕುಸಿತ ಕಂಡಿದೆ. ಇದರ ನಡುವೆ ಡ್ರ್ಯಾಗನ್ ದೇಶದಲ್ಲಿ ವಯಸ್ಕರ ಸಂಖ್ಯೆ ಹೆಚ್ಚುತ್ತಿರುವುದು ಒಂದು ದೊಡ್ಡ ಸಮಸ್ಯೆಯಾಗಿದೆ.
ತನ್ನ ಮ್ಯಾನ್ ಪವರ್ ನಿಂದಲೆ ಆರ್ಥಿಕವಾಗಿ ಬೆಳೆದಿರುವ ಚೀನಾ, ಮುಂದಿನ ಪೀಳಿಗೆಯಲ್ಲಿ ದುಡಿಯುವವರೇ ಇಲ್ಲವಾಗಿಬಿಡುತ್ತಾರೆಂಬ ಭಯದಲ್ಲಿ ಶಿಶು ಜನನ ಪ್ರಮಾಣ ಹೆಚ್ಚಿಸಲು ಹೊಸ ಪ್ರಯೋಗಕ್ಕೆ ಮುಂದಾಗಿದೆ. ಚೀನಾದ ರಾಜಧಾನಿಯಲ್ಲಿರುವ ಸರ್ಕಾರಿ ಬೆಂಬಲಿತ ವೈದ್ಯಕೀಯ ವಿಮಾ ಯೋಜನೆಯಲ್ಲಿ, ಇನ್ಮುಂದೆ ಒಂದು ಡಜನ್‌ಗಿಂತಲೂ ಹೆಚ್ಚು ಫರ್ಟಿಲಿಟಿ ಸೇವೆಗಳು ಒಳಗೊಂಡಿರುತ್ತವೆ ಎಂದು ರಾಜ್ಯ ಮಾಧ್ಯಮ ಸೋಮವಾರ ವರದಿ ಮಾಡಿದೆ.
ಬಜರಂಗದಳ ಕಾರ್ಯಕರ್ತನ ಹತ್ಯೆ ಖಂಡಿಸಿ ಫೆ. 23 ರಂದು ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ
ಈ ಮೂಲಕ ಮತ್ತಷ್ಟು ಮಕ್ಕಳನ್ನು ಹೊಂದಲು ಬಯಸುವವರಿಗೆ ಚೀನಾ ಸರ್ಕಾರದ ವಿಮಾ ಯೋಜನೆಗಳಿಂದ ಸಾಕಷ್ಟು ಬೆಂಬಲ ಸಿಗಲಿದೆ ಎಂದು ಬೀಜಿಂಗ್ ಡೈಲಿ ಪ್ರಕಟಿಸಿದೆ. ಪೂರ್ವಭಾವಿ ಫರ್ಟಿಲಿಟಿ ಬೆಂಬಲ ಕ್ರಮಗಳನ್ನು ತೆಗೆದುಕೊಳ್ಳುವ ನಿಟ್ಟಿನಲ್ಲಿ, ಸಹಾಯಕ ಸಂತಾನೋತ್ಪತ್ತಿ ತಂತ್ರಜ್ಞಾನಗಳನ್ನು (ART) ಬಳಸಿಕೊಂಡು ಒಟ್ಟು 16 ವೈದ್ಯಕೀಯ ಸೇವೆಗಳಿಗೆ ಸರ್ಕಾರಿ ವಿಮೆಯಲ್ಲಿ ಉತ್ತಮ ಕವರೇಜ್ ನೀಡಲು ತೀರ್ಮಾನಿಸಲಾಗಿದೆ, ಈ ನಿಯಮ ಮಾರ್ಚ್ 26 ರಿಂದ ಜಾರಿಯಾಗಲಿದೆ.
ಹೊಸ ಸಂತಾನೋತ್ಪತ್ತಿ ಕವರೇಜ್ ಕಡಿಮೆ ಹಣದ ವೆಚ್ಚಗಳಿಗೆ ಸಹಾಯ ಮಾಡುತ್ತದೆ. ಖಾಸಗಿ ವೈದ್ಯಕೀಯ ವಿಮೆ ಪಡೆಯಲು ಸಾಧ್ಯವಾಗದ ಕಡಿಮೆ ಆದಾಯದ ಕುಟುಂಬಗಳಿಗೆ, ಶಿಶುಗಳನ್ನು ಹೊಂದಲು ಈ ಸರ್ಕಾರಿ ವಿಮೆ ಸಹಾಯಕವಾಗಲಿದೆ.
ಆಕ್ಲೆಂಡ್ ವಿಶ್ವವಿದ್ಯಾಲಯ ಅಧಿಕೃತ ಮಾಹಿತಿಯ ಪ್ರಕಾರ, 2021 ರಲ್ಲಿ ಚೀನಾದ ಜನನ ಪ್ರಮಾಣವು ದಾಖಲೆಯ ಕುಸಿತ ಕಂಡಿದೆ. ಜನನ ಪ್ರಮಾಣದ ಇಳಿಕೆ ಕಂಡ ಚೀನಾ, ಜನಸಂಖ್ಯೆ ಕಡಿವಾಣಕ್ಕೆ ಹಾಕಿದ್ದ ಒಂದು ಮಗುವಿನ ಪದ್ಧತಿಯನ್ನು 2016 ರಲ್ಲಿ ರದ್ದುಗೊಳಿಸಿತು. ಇದು ಸುಮಾರು ನಾಲ್ಕು ದಶಕಗಳಿಂದ ನಡೆದುಕೊಂಡು ಬಂದಿದ್ದರಿಂದ ಚೀನಾದಲ್ಲಿ ವಯಸ್ಸಾದವರ ಜನಸಂಖ್ಯೆಯು ಹೆಚ್ಚುತ್ತಿದ್ದು, ತಜ್ಞರು ಇದನ್ನು “ಜನಸಂಖ್ಯಾ ಟೈಮ್-ಬಾಂಬ್” ಕರೆಯುತ್ತಿದ್ದಾರೆ.